ಪುತ್ತೂರು,ಫೆ 13 (MSP): ಆರು ವರ್ಷಗಳ ಹಿಂದೆ ನಡೆದ ಕಕ್ಕೂರು ಸಾಮೂಹಿಕ ಕೊಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಮೂವರು ಮಕ್ಕಳನ್ನು ಕೊಲೆಗೈದು ವೆಂಕಟರಮಣ್ ಭಟ್ ಆತ್ಮಹತ್ಯೆಗೈದಿದ್ದಾರೆ ಎಂದು ಪೊಲೀಸರು ನಿರ್ಧರಿಸಿದ್ದರು. ಆದರೆ ಇದೀಗ ಈ ಪ್ರಕರಣಕ್ಕೆ ರೋಚಕ ತಿರುವು ಪಡೆದಿದ್ದು, ಕಕ್ಕೂರು ಗುಡ್ಡದಲ್ಲಿ ದೊರೆತ ಅಸ್ಥಿಪಂಜರ, ಕಕ್ಕೂರು ವೆಂಕ್ರಟ್ರಮಣ ಭಟ್ ಅವರದ್ದಲ್ಲ ಎನ್ನುವುದು ಪುಣೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ತಿಳಿದುಬಂದಿದೆ. ಕಕ್ಕೂರು ಕಾಡಿನ ನಡುವಿನಲ್ಲಿ ಸಿಕ್ಕಿದ್ದ ಅಸ್ಥಿಪಂಜರ ಹಾಗೂ ಕಕ್ಕೂರು ವೆಂಕಟ್ರಮಣ ಭಟ್ ಅವರ ಸಹೋದರನ ರಕ್ತದ ಮಾದರಿಗೆ ಸರಿಹೊಂದುತ್ತಿಲ್ಲ ಎಂದು ಪ್ರಯೋಗಾಲಯದ ವರದಿ ತಿಳಿಸಿದೆ.
ಪ್ರಕರಣದ ವಿವರ:
ಕಕ್ಕೂರಿನ ವೆಂಕಟರಮಣ ಭಟ್ ಎಂಬವರ ಪತ್ನಿ ಸಂದ್ಯಾ , ಪುತ್ರ ಹರಿಗೋವಿಂದ ಹಾಗು ಇಬ್ಬರು ಪುತ್ರಿಯರಾದ ವೇದ್ಯಾ, ವಿನುತಾ 2012 ಜೂ.12 ರಂದು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಮತ್ತು ಮನೆಯೊಡೆಯ ವೆಂಕರಮಣ ಭಟ್ ನಾಪತ್ತೆಯಾಗಿದ್ದರು . ಹತ್ತು ಹಲವು ಅನುಮಾನ ಹುಟ್ಟಿಹಾಕಿದ್ದ ಈ ಪ್ರಕರಣ ,ರಾಜ್ಯಾಧ್ಯಂತ ದೊಡ್ಡ ಸುದ್ದಿಮಾಡಿತ್ತು. ಕೊಲೆಯಾದ 3 ದಿನಗಳ ನಂತರ ವಿದ್ಯುತ್ ರೀಡರ್ ಮನೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿತ್ತು.
ನಾಟಿ ವೈದ್ಯ , ಜ್ಯೋತಿಷಿ ವೆಂಕಟರಮಣ್ ಭಟ್ ಅವರೇ ಪತ್ನಿ ಮಕ್ಕಳನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಹಬ್ಬಿತ್ತಿದ್ದಂತೆ, 5 ತಿಂಗಳ ನಂತರ, ಅಂದರೆ 2012ರ ನ.13 ರಂದು ಕಕ್ಕೂರು ಕಾಡಿನ ನದುವೆ ಅಸ್ಥಿಪಂಜರವೊಂದು ಸಿಕ್ಕಿತ್ತು. ಇದು ವೆಂಕಟರಮಣ್ ಅವರದೆಂದು ಭಾವಿಸಿಲಾಗಿತ್ತು. ಆದರೆ ಇದೀಗ ಪುಣೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯ ಬಳಿಕ ಪ್ರಕರಣ ಅಂತ್ಯಗೊಂಡಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಸಾಮೂಹಿಕ ಕೊಲೆ ನಡೆಯುವ ಮುಂಚೆ ಕಕ್ಕೂರು ವೆಂಕಟರಮಣ್ ಭಟ್ ಅವರ ಮನೆಯಲ್ಲಿ ಎರಡು ವಾರಗಳ ಹಿಂದೆ ಮನೆ ದರೋಡೆ ನಡೆದಿತ್ತು. ಈ ಬಗ್ಗೆ ಸಂಪ್ಯ ಪೊಲೀಸರಿಗೆ ಭಟ್ಟರು ದೂರು ನೀಡಿದ್ದರು. ಆದರೆ ಆ ನಂತರದ ಬೆಳವಣಿಗೆಯಲ್ಲಿ ಭಟ್ಟರೇ ಮನೆ ದರೋಡೆಯ ಕಟ್ಟು ಕತೆ ಸೃಷ್ಠಿಸಿದ್ದಾರೆ ಎಂಬ ಅಪಪ್ರಚಾರವೂ ನಡೆದಿತ್ತು. ಪೊಲೀಸರೂ ಆ ನಿಟ್ಟಿನಲ್ಲಿ ಭಟ್ಟರನ್ನು ಮತ್ತು ಅವರ ಮನೆಯವರನ್ನು ವಿಚಾರಣೆ ನಡೆಸಲು ಮುಂದಾಗಿದ್ದರು. ಆದರೆ ಆ ಬಳಿಕ ನಡೆದ ಪತ್ನಿ ಮಕ್ಕಳ ಕೊಲೆ ಪ್ರಕರಣವು ಕುತೂಹಲ ಕೆರಳಿಸಿತ್ತು. ಮಾತ್ರವಲ್ಲದೆ ಪತ್ನಿ ಮಕ್ಕಳ ಕೊಲೆಯೊಂದಿಗೆ ಮನೆ ದರೋಡೆ ನಾಟಕ ಎಂಬುವುದಕ್ಕೆ ಹೆಚ್ಚಿನ ಪುಷ್ಠಿ ಲಭಿಸಿದ್ದರೂ ಬಳಿಕ ಕಕ್ಕೂರು ಮನೆ ದರೋಡೆಗೈದ ಕಳ್ಳರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಮನೆ ದರೋಡೆ ಘಟನೆಯು ಸತ್ಯ ಎಂಬುವುದು ಸ್ಪಷ್ಟವಾಗಿತ್ತು. ಮನೆ ದರೋಡೆ ಪ್ರಕರಣ ಮತ್ತು ಆ ಬಳಿಕ ಎದ್ದ ಅಪಪ್ರಚಾರ ಹಾಗೂ ಪೊಲೀಸರ ತನಿಖೆಯಿಂದ ಬೇಸತ್ತು ವೆಂಕಟ್ರಮಣ ಭಟ್ ಅವರು ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗುತ್ತಿತ್ತು.
ಇದಲ್ಲದೇ ಯಾವುದೋ ಅಮೂಲ್ಯ ವಸ್ತುವನ್ನು ಮಾರಾಟ ಮಾಡಲು ದರೋಡೆ ತಂಡದ ಸದಸ್ಯರನ್ನು ಭಟ್ಟರೆ ಮನೆಗೆ ಕರೆದಿದ್ದರು. ವ್ಯವಹಾರ ವಿಫಲವಾದಾಗ ದರೋಡೆ ನಡೆದಿದೆ. ಅಮೂಲ್ಯ ವಸ್ತುವಿನ ರಹಸ್ಯ ಮಡದಿ ಮಕ್ಕಳು ಬಾಯಿ ಬಿಡುವ ಭಯದಿಂದ ಭಟ್ಟರು ಅವರ ಕೊಲೆ ನಡೆಸಿರುವ ಸಾಧ್ಯತೆ ಇದೆ. ಬಳಿಕ ಭಟ್ಟರೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗುತ್ತಿದೆ. ಭಟ್ಟರ ಮನೆಯಲ್ಲಿ ನಡೆದ ದರೋಡೆಯ ವಿಷಯ ಭಟ್ಟರು ಯಾರಿಗೂ ತಿಳಿಸಿರಲಿಲ್ಲ. ಭಟ್ಟರನ್ನು ಕೊನೆಯ ಬಾರಿ ಜು. 12ರಂದು ಬೆಳಗ್ಗೆ ಭಟ್ಟರ ಕಕ್ಕೂರಿನ ಮನೆಯಲ್ಲಿ ಅವರ ಟೈಪಿಸ್ಟ್ ವಿಮಲಾ ನೋಡಿದ್ದಾರೆ. ಭಟ್ಟರು ಅಂದು ಬೆಳಗ್ಗೆ ತಂಬುತ್ತಡ್ಕ ಬಸ್ ನಿಲ್ದಾಣದ ಬಳಿ ಇದ್ದುದನ್ನು ರಿಕ್ಷಾ ಚಾಲಕರೋರ್ವರು ನೋಡಿದ್ದರು.
ಇಡೀ ಪ್ರಕರಣ ಕೊನೆ ಆಸರೆಯಾಗಿ ಉಳಿದುಕೊಂಡಿದ್ದು ಪುಣೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ.ಆದರೆ ಈಗ ಆಸ್ಥಿಪಂಜರ ವೆಂಕಟರಮಣ್ ಭಟ್ ಅವರದ್ದಲ್ಲ ಎನ್ನುವ ಮೂಲಕ ಪ್ರಕರಣ ಇನ್ನಷ್ಟು ಕ್ಲಿಷ್ಟವಾಗಿದೆ. ಕೊಲೆಗಾರ ಯಾರು? ವೆಂಕಟರಮಣ್ ಭಟ್ ಎಲ್ಲಿದ್ದಾರೆ? ಕಾಡಿನಲ್ಲಿ ಸಿಕ್ಕಿದ್ದ ಅಸ್ಥಿಪಂಜರ ಯಾರದ್ದು? ಎಂಬುವುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸಬೇಕಾದ ಸವಾಲು ಎದುರಾಗಿದೆ.