ಮಂಗಳೂರು,ಫೆ 14(MSP): ಬಿಜೆಪಿ ರಾಜ್ಯಾದ್ಯಕ್ಷ, ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಅಪರೇಷನ್ ಕಮಲ ಕಾರ್ಯಾಚರಣೆ ಬಿಜೆಪಿ ಪಕ್ಷವನ್ನೇ ನಾಶ ಮಾಡುತ್ತದೆ ಹೀಗಾಗಿ ಇದನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಫೆ.14 ರ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಅಪರೇಷನ್ ಕಮಲ ಯಡಿಯೂರಪ್ಪ ಅವರ ಹವ್ಯಾಸವೇ ಆಗಿಹೋಗಿದೆ. ಹೀಗಾಗಿ ಅವರು ಎಂದೂ ಈ ಕಾರ್ಯಾಚರಣೆಯನ್ನು ಕೈಬಿಡಲಾರರು. ಆದರೆ ಅವರ ಈ ಕೆಟ್ಟ ಹವ್ಯಾಸ ಪಕ್ಷವನ್ನೇ ನಾಶ ಮಾಡುತ್ತದೆ. ಅಪರೇಷನ್ ಕಮಲ ಮಾಡಲು ಹೋಗಿ ಅವರ ಪಕ್ಷವನ್ನು ಅವರೇ ನಾಶ ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ.ಈ ಕಾರ್ಯಾಚರಣೆ ರಾಷ್ಟ್ರ ಮಟ್ಟದಲ್ಲೂ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತಂದಿದೆ. ಪಕ್ಷಕ್ಕೂ ಕೆಟ್ಟ ಹೆಸರು ತಂಡಿದೆ. ಇನ್ನಾದರೂ ಅವರು ಅವರು ಅಪರೇಷನ್ ಕಮಲ ಕೈಬಿಡುವುದು ಒಳಿತು ಎಂದು ಪೂಜಾರಿ ಸಲಹೆ ನೀಡಿದರು.
ಆಡಿಯೋ ಕ್ಲಿಪ್ ತನಿಖೆಗೆ ಬಿಜೆಪಿಯ ವಿರೋಧಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, 'ಆಡಿಯೋ ಕ್ಲಿಪ್ ಬಗ್ಗೆ ಸತ್ಯಾಂಶ ಹೊರಬರಲೇಬೇಕು. ಬಿಜೆಪಿಯವರು ಅನುಮತಿ ನೀಡಲಿ ಬಿಡಲಿ, ಸತ್ಯ ವಿಚಾರ ಏನೆಂದು ತಿಳಿಯಬೇಕು' ಎಂದು ತಿಳಿಸಿದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಲಿ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿಕೆಯ ಬಗ್ಗೆ ಉತ್ತರಿಸಿದ ಅವರು, ಇದು ಅವರ ವೈಯಕ್ತಿಕ ಅಭಿಪ್ರಾಯ ಮತ್ತು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ, ಯಾರಿಗೆ ಅಧಿಕಾರ ಸಿಗುತ್ತೋ ಅವರು ಪ್ರಧಾನಮಂತ್ರಿಯಾಗುತ್ತದೆ ಎಂದು ಪೂಜಾರಿ ಹೇಳಿದರು.