'ನಾನು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ನಾನು ಇಡೀ ದೇಶದ ಪರವಾಗಿ ಸನ್ಮಾನ ಮಾಡುತ್ತಿದ್ದೇನೆ. ಅವರಂತಹ ಮಹಾನ್ ಸಾಧನೆಗಳ ಮುಂದೆ ನಾನೊಬ್ಬ ಸಾಮಾನ್ಯ ವ್ಯಕ್ತಿ 'ಇದು ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಹೆಗ್ಗಡೆ ಅವರನ್ನು ಶ್ಲಾಘಿಸಿದ ಪರಿ ಇಲ್ಲಿನ ರತ್ನವರ್ಮ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮೀಣ ಅಭಿವೃದ್ಧಿ ಯೋಜನೆಯ ಮಹಾ ಸಮಾವೇಶದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ ಜನರು ಡಿಜಿಟಲ್ ಯುಗದಲ್ಲಿ ಕ್ಯಾಶ್ ಲೆಸ್ ವ್ಯವಹಾರ ಮಾಡಲು ಕರೆ ನೀಡಿದರು.
ಕನ್ನಡದಲ್ಲಿ ಭಾಷಣ ಆರಂಭ
'ನಮೋ ಮಂಜುನಾಥ.. ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು , ನನ್ನ ಸಹೋದರಿಯರಿಗೆ ವಿಶೇಷ ಅಭಿನಂದನೆಗಳು' ಎಂದು ಭಾಷಣ ಕನ್ನಡದಲ್ಲಿ ಆರಂಭಿಸಿದ ಮೋದಿಯ ಮಾತಿಗೆ ನೆರೆದಿದ್ದ ಸಭಾಂಗಣವೇ ತಲೆತೂಗಿತು. ಶಿಳ್ಳೆ ಚಪ್ಪಾಳೆ ..ಮೋದಿ ಮೋದಿ ಎನ್ನುವ ಕೂಗು ಮುಗಿಲು ಮುಟ್ಟಿತ್ತು.
ಅತ್ಯಂತ ಸಣ್ಣ ವಯಸ್ಸಿನಲ್ಲಿಯೇ ಧರ್ಮಾಧಿಕಾರಿ ಅಧಿಕಾರ ಪಡೆದು ತ್ಯಾಗ, ತಪಸ್ಸಿನ ಮೂಲಕ ಜೀವನವನ್ನು ವೃತವನ್ನಾಗಿಸಿದ ಹೆಗ್ಗಡೆಯವರನ್ನು ಕೊಂಡಾಡುತ್ತಲೇ ಮಾತಿಗಿಳಿದ ಮೋದಿ 'ರುಪೇ ಕಾರ್ಡ್ ಮೂಲಕ ನಾವು ಕ್ಯಾಶ್ ಲೆಸ್ ವ್ಯವಹಾರ ಮಾಡುತ್ತೇವೆ ಎನ್ನುವುದಾಗಿ ಇಂದು 12 ಲಕ್ಷ ತಾಯಂದಿರು ಸಂಕಲ್ಪ ಮಾಡಿದ್ದಾರೆ. ಅವರಿಗಿಂತ ನಾವು ಹಿಂದೆ ಬೀಳಬಾರದು, ಎಲ್ಲರೂ ಕ್ಯಾಶ್ ಲೆಸ್ ಆಗುವತ್ತ ಗಮನ ಹರಿಸಬೇಕು. ಎಲ್ಲರೂ ಭೀಮ್ ಆ್ಯಪ್ ಬಳಸಿ, ರುಪೇ ಕಾರ್ಡ್ ಬಳಸಿ ಅವ್ಯವಹಾರ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಎಂದರು.
ನೋಟು ಅಮಾನ್ಯವಾದಾಗ ನಗದು ವ್ಯವಹಾರ ಸಾದ್ಯವೇ ಇಲ್ಲ ಎಂದು ಹೀಗಳೆದ ಜನಕ್ಕೆ, ಡಾ ವೀರೇಂದ್ರ ಹೆಗ್ಗಡೆ 12 ಲಕ್ಷ ಜನಕ್ಕೆ ರುಪೇ ಕಾರ್ಡ್ ನೀಡುವ ಮೂಲಕ ಸೂಕ್ತ ಉತ್ತರ ನೀಡಿದ್ದಾರೆ ಎಂದರು. ಬಳಿಕ ಮಾತನಾಡುತ್ತಾ ಭಾಷಣದಲ್ಲಿ ನಾವು ಪರಿಸರ ಸಂರಕ್ಷಣೆ ಮಾಡೋಣ, ನೀರನ್ನು ಉಳಿಸೋಣ ಎಂದು ಸಂಕಲ್ಪ ಮಾಡೋಣ ಎಂದರು. ನಮ್ಮ ರೈತರು 2020 ಕ್ಕೆ ಯೂರಿಯಾ ಬಳಕೆಯನ್ನು ಶೇ. 50 ರಷ್ಟು ಕೃಷಿಯಲ್ಲಿ ಕಡಿಮೆ ಮಾಡಿದರೆ, ಭೂಮಿಯ ಪಲವತ್ತತೆಯ ಪ್ರಮಾಣ ಹೆಚ್ಚುವುದರ ಜತೆಗೆ ರೈತರ ಹಣವೂ ಉಳಿತಾಯವಾಗುತ್ತದೆ ಎಂದರು. ನೀರಿನ ಮಿತಬಳಕೆಯ ಬಗ್ಗೆಯೂ ಪ್ರಸ್ತಾಪಿಸಿದರು.
ಸಮಾರಂಭದಲ್ಲಿ , ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಅನಂತ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಡಿ ವಿ ಸದಾನಂದ ಗೌಡ, ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.