ಕುಂದಾಪುರ, ಅ. 29: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ನ.24ರಿಂದ26ರವರೆಗೆ ನಡೆಯಲಿರುವ ಧರ್ಮ ಸಂಸದ್ ಮಹಾ ಸಮ್ಮೆಳನದ ಪ್ರಚಾರಾರ್ಥ ಜಿಲ್ಲಾದ್ಯಂತ ಸಂಚರಿಸುತ್ತಿರುವ ಸುಧರ್ಮ ರಥಯಾತ್ರೆಗೆ ಕುಂದಾಪುರಲ್ಲಿ ರವಿವಾರ ಮಧ್ಯಾಹ್ನ ಭವ್ಯ ಸ್ವಾಗತ ಕೋರಲಾಯಿತು.
ತಲ್ಲೂರಿನಿಂದ ಕುಂದಾಪುರಕ್ಕೆ ಬಕ್ ರ್ಯಾಲಿ ಮೂಲಕ ಆಗಮಿಸಿದ ಸುಧರ್ಮ ರಥಕ್ಕೆ ಹಾರಾರ್ಪಣೆ ಮಾಡಿ ಹಾಗೂ ಆರತಿ ಮಾಡಿದ ವಿಹಿಂಪ ಮಂಗಳೂರು ವಿಭಾಗದ ಕಾರ್ಯವಾಹ ಸುಬ್ರಹ್ಮಣ್ಯ ಹೊಳ್ಳ ಮಾತನಾಡಿ, ಹಿಂದೂ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಅನೇಕ ದೇಶಗಳ ಜನರು ಈ ದೇಶಕ್ಕೆ ಬಂದು ಇಲ್ಲಿ ನಲೆ ನಿಂತರು ಹಾಗೂ ಇಲ್ಲಿನ ಭೋಗ ಭಾಗ್ಯಗಳನ್ನು ಅನುಭವಿಸಿದ್ದಲ್ಲದೇ ಈ ದೇಶವನ್ನು ಕೊಳ್ಳೆ ಹೊಡೆದರು. ಈ ದೇಶವನ್ನು ನಾಶ ಮಾಡಲು ಹೊರಟರು. ಆದರೆ ಹಿಂದೂ ರಾಷ್ಟ್ರ ಶಕ್ತಿ ಶಾಲಿ ರಾಷ್ಟ್ರವಾಗಿರುವುದರಿಂದ ಯಾವ ದುಷ್ಟ ಶಕ್ತಿ ದೇಶವನ್ನು ಏನೂ ಮಾಡಲು ಸಾಧ್ಯವಾಗಿಲ್ಲ. ಮುಂದೆಯೂ ಅಸಾಧ್ಯ. ಇಂದು ಹೊರಗಿನ ಆಕ್ರಮಣ ಹೆಚ್ಚಾಗಿದೆ. ಆಶ್ರಯ , ಆಹಾರ ಕೊಟ್ಟ ಸಮಾಜವನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿದೆ. ಹೊರಗಿನ ಅತಿಕ್ರಮಣ ಒಂದೆಡೆಯಾದರೆ ದೇಶದಲ್ಲಿ ಆಂತರಿಕವಾಗಿ ಸಮಾಜವನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿದೆ. ಜಿಹಾದ್ಗಳ ಹೆಸರಿನಲ್ಲಿ ಸಮಾಜವನ್ನು ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಮತಾಂತರ ಹಾಗೂ ಭಯೋತ್ಪಾದನೆ ಮೂಲಕ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿದೆ . ಆದ್ದರಿಂದ ಸಮಸ್ತ ಹಿಂದೂ ಬಾಂಧವರು ಸಂಘಟಿತರಾಗಿ ಸಾಮಾಜಿಕ ಸಾಮರಸ್ಯವನ್ನು ಬೆಳೆಸುವಲ್ಲಿ ಮುಂದಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಬಜರಂಗ ದಳ ಜಿಲ್ಲಾ ಸಹ ಸಂಚಾಲಕ ಗಿರೀಶ್ ಕುಂದಾಪುರ, ತಾಲೂಕು ಸಂಚಾಲಕ ಸುದೀರ್ ಮೇರ್ಡಿ, ತಾಲೂಕು ಸಹ ಸಂಚಾಲಕ ಶ್ರೀಕಾಂತ್ ಶೆಟ್ಟಿ, ರಥದ ಸಂಚಾಲಕ ದಿನೇಶ್ ಆಚಾರ್ಯ ಕಂಡ್ಲೂರು, ಕಾರ್ಯದರ್ಶಿಸಂತೋಷ್ ಕುಂದಾಪುರ, ಪ್ರದೀಪ್ಕೋಟೇಶ್ವರ, ಪ್ರಸನ್ನ ಕೋಟೇಶ್ವರ, ಮಾರುತಿ ಕೋಟೇಶ್ವರ, ಮುಖಂಡರುಗಳಾದ ರಾಜೇಶ್ ಕಾವೇರಿ, ಶಂಕರ ಅಂಕದಕಟ್ಟೆ, ದಿವಾಕರ್ ಮೊದಲಾದವರು ಉಪಸ್ಥಿತರಿದ್ದರು.