ಕಾರ್ಕಳ, ಫೆ 15(MSP): ಕಾಂತಾವರ ಪರಿಸರದಲ್ಲಿ ಚಿರತೆ ದಾಳಿಗೆ ಇಬ್ಬರು ಗ್ರಾಮಸ್ಥರು ಗಾಯಗೊಂಡಿದ್ದಾರೆ. ಸ್ಥಳೀಯ ನಿವಾಸಿ ಸುಂದರ ಪೂಜಾರಿ (69), ಹಾಗೂ ಮೀನಾ (52) ಎಂಬುವರು ಗಾಯಗೊಂಡಿದ್ದು, ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆ ವಿವರ
ಕಾಂತಾವರ ಪರಿಸರದಲ್ಲಿ ಕಳೆದ ಮೂರು ದಿನಗಳಿಂದ ಚಿರತೆಯೊಂದು ಕಾಣ ಸಿಕ್ಕಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಲು ಕಾರಣವಾಗಿತ್ತು. ಅದರನ್ವಯ ಅರಣ್ಯ ಇಲಾಖೆಯು ಕ್ರಮ ಕೈಗೊಂಡು ಘಟನೆಯ ಒಂದು ಕಿ.ಮೀ ದೂರದಲ್ಲಿ ಪಂಜರವೊಂದರನ್ನು ಇಟ್ಟರಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಶುಕ್ರವಾರ ಬೆಳಗಿನ ಹೊತ್ತಿನಲ್ಲಿ ಸುಂದರ್ ಪೂಜಾರಿ ತಮ್ಮ ಮನೆಯ ಅಂಗಳದಲ್ಲಿ ನಿಂತುಕೊಂಡಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಚಿರತೆ ಅವರ ಮೇಲೆರಗಿ ದಾಳಿ ನಡೆಸಿ ಗಾಯಗೊಳಿಸಿದೆ. ಗಾಯಾಳುವಿನ ಚೀರಾಟದಿಂದ ಚಿರತೆ ಸ್ಥಳದಿಂದ ಕಾಲ್ಕಿತ್ತಿತ್ತು. ಇದಾದ ಬೆನ್ನಲ್ಲೆ ಪರಿಸರದ ನಿವಾಸಿ ಮೀನಾ ಎಂಬುವರು ಪಡಿತರ ಸಾಮಾಗ್ರಿ ತರಲು ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆರಗಿ ಮುಖಕ್ಕೆ ಗೀರಿ ಗಾಯಗೊಳಿಸಿದೆ. ಮಾಹಿತಿ ತಿಳಿದ ತಕ್ಷಣ ಗ್ರಾಮಸ್ಥರು ಇಲಾಖೆಯ ಸಹಯೋಗದಲ್ಲಿ ಚಿರತೆಯ ಹುಡುಕಾಟ ನಡೆಸಿದ್ದಾರೆ. ಸಮೀಪದ ಹಾಡಿಯೊಂದರಲ್ಲಿ ಚಿರತೆ ಮಲಗಿರುವುದು ಗಮನಿಸಿದ್ದಾರೆ.
ಕಾರ್ಯಚರಣೆಯ ನೇತೃತ್ವವನ್ನು ಎಸಿಎಫ್ ಎಂ. ಎನ್. ಅಚ್ಚಪ್ಪ ವಹಿಸಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಚರಣೆ ಸಹಕರಿಸಿದ್ದಾರೆ.
ಇಲಾಖೆಯ ವಿರುದ್ಧ ತಿರುಗಿ ಬಿದ್ದ ಗ್ರಾಮಸ್ಥರು!
ಕಳೆದ ಮೂರು ದಿನಗಳಿಂದ ಕಾಂತವಾರ ಪರಿಸರದಲ್ಲಿ ಚಿರತೆ ಬೀಡು ಬಿಟ್ಟಿದ್ದು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಚಿರತೆ ದಾಳಿ ನಡೆಸಿ ಅರ್ಧ ದಿನ ಕಳೆದರೂ ಚಿರತೆಯನ್ನು ಸೆರೆ ಹಿಡಿಯುವಲ್ಲಿ ವಿಳಂಬ ಧೋರಣೆ ಅನುಸಿರಿಸುತ್ತಿದ್ದಾರೆ ಎಂಬ ಆಕ್ರೋಶವನ್ನು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಜಯಕೋಟ್ಯಾನ್ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಅಥವಾ ಶಿವಮೊಗ್ಗವನ್ನೇ ಆಶ್ರಯಿಸಿಬೇಕು -ಎಸಿಎಫ್ ಎಂ. ಎನ್. ಅಚ್ಚಪ್ಪ
ಕಾಡು ಪ್ರಾಣಿಗಳ ಸೆರೆ ಅಗತ್ಯವಾದ ಸಲಕರಣೆ ಹಾಗೂ ಅರಿವಳಿಕೆ ಚುಚ್ಚು ಮದ್ದು ನೀಡುವ ವೈದ್ಯರ ಅಗತ್ಯತೆ ಶಿವಮೊಗ್ಗ ಅಥವಾ ಮಂಗಳೂರನ್ನೇ ಆಶ್ರಯಿಸಿಕೊಳ್ಳಬೇಕಾಗುತ್ತದೆ. ಕಾಡು ಪ್ರಾಣಿಗಳು ಮನುಷ್ಯನ ಮೇಲೆ ದಾಳಿ ನಡೆಸಿದಾಗ ಅರಿವಳಿಕೆ ಚುಚ್ಚು ನೀಡುವ ಅವಕಾಶಗಳು ಜಾಸ್ತಿಯಾಗಿರುತ್ತದೆ. ಅಲ್ಲಿಂದ ವೈದ್ಯರು ಬರುವಾಗ ಕೆಲ ಗಂಟೆ ತಗಲುತ್ತದೆ.