ಬೆಂಗಳೂರು ಅ 29: ಉಜಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಮೋದಿ ನೇರವಾಗಿ ವಾಯುಪಡೆಯ ವಿಶೇಷ ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿನ ಹೆಚ್ಎಎಲ್ ಗೆ ಬಂದಿಳಿದರು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯಪಾಲ ವಜೂಭಾಯಿ ವಾಲಾ ಅವರು ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹೊದಿಸಿ ಆದರದಿಂದ ಬರಮಾಡಿಕೊಂಡರು. ರಾಜ್ಯ ಬಿಜೆಪಿ ಘಟಕದಿಂದ ಹೆಚ್ಎಎಲ್ ಪಾರ್ಕಿಂಗ್ ಬಳಿ ಚಿಕ್ಕ ಸಮಾವೇಶವನ್ನು ಆಯೋಜನೆ ಮಾಡಲಾಗಿತ್ತು. ಅಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದ್ದೇಶಿಸಿ ಮಾತನಾಡಿದ ಮೋದಿ ನೇರವಾಗಿ ಕಾಂಗ್ರೇಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ದೇಶದ ಭದ್ರತೆಯ ವಿಷಯದಲ್ಲಿ ಯಾವತ್ತು ವಿರೋಧ ಪಕ್ಷಗಳು ರಾಜಕೀಯ ಮಾಡಬಾರದು. ಆದರೆ ಕಾಂಗ್ರೆಸ್ ನಿರ್ಲಜ್ಜವಾಗಿ ಕಾಶ್ಮೀರದ ಬಗ್ಗೆ ಪಾಕಿಸ್ತಾನದಲ್ಲಿ ಆಡುವ ಭಾಷೆ ಬಳಸಿದೆ. ಯಾರು ಏನೇ ಹೇಳಿದರೂ ಸಹ ಸರ್ಧಾರ್ ವಲ್ಲಭಾಯ್ ಪಟೇಲರ ಜನ್ಮ ಭೂಮಿಯಲ್ಲಿ ಜನಿಸಿದ ನಾವು ಎಂದಿಗೂ ಅದಕ್ಕೆ ಅವಕಾಶ ಕೊಡುವುದಿಲ್ಲ.ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಕಾಂಗ್ರೆಸ್ಸಿಗರು ಏಕೆ ಅಸಮಾಧಾನಗೊಂಡಿದ್ದರು ಅಂತಾ ಗೊತ್ತಾಗುತ್ತಿದೆ.ಡೊಕ್ಲಾಮ್ ವಿಷಯದಲ್ಲೂ ಅಷ್ಟೇ ಚೀನಾ ಎಷ್ಟೇ ಬಲಿಷ್ಠವಾಗಿದ್ದರೂ ನಾವು ಧೈರ್ಯವಾಗಿ ಎದುರಿಸಿದೆವು.ರಾಷ್ಟ್ರದ ರಕ್ಷಣೆ ವಿಷಯದಲ್ಲಿ ಕೈ ಜೋಡಿಸಬೇಕಿದ್ದ ಕಾಂಗ್ರೆಸ್ ದಿನೇ ದಿನೇ ಸುಳ್ಳು ವದಂತಿಗಳನ್ನು ಹರಡುತ್ತಿತ್ತು. ಸೋಲಿನ ಮೇಲೆ ಸೋಲಿನಿಂದ ಕಾಂಗ್ರೆಸ್ ಪಾಠ ಕಲಿಯಬೇಕಿತ್ತು. ಆದರೆ ಅವರ ಅಹಂಕಾರ ತಗ್ಗಿಲ್ಲ. ಅವರ ಈ ಭಾಷೆಗೆ ಈ ರಾಷ್ಟ್ರದ ಜನ ಉತ್ತರ ನೀಡುತ್ತಾರೆ.
ನಾನು ಇವತ್ತು ಇಲ್ಲಿಗೆ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದೇನೆ.ಸಂಜೆ ರೈಲ್ವೆ ಯೋಜನೆ ಉದ್ಘಾಟನೆಗೆ ತೆರಳುತ್ತೇನೆ.ನಿಮ್ಮ ಈ ಅಭೂತಪೂರ್ವ ಸ್ವಾಗತಕ್ಕಾಗಿ ನಾನು ಆಭಾರಿಯಾಗಿದ್ದೇನೆ. ಎಂದು ಚುಟುಕು ಭಾಷಣ ಮಾಡಿ ಕಾರ್ಯಕರ್ತರನ್ನು ಮಾತಿನಲ್ಲೇ ಹುರಿದುಂಬಿಸಿದ ಮೋದಿ ನಂತರ ಪ್ಯಾಲೆಸ್ ಗ್ರೌಂಡ್ ನಲ್ಲಿ ನಡೆದ ಸೌಂದರ್ಯ ಲಹರಿ ಸಮರ್ಪಣಾ ಕಾರ್ಯಕ್ರಮದತ್ತ ತೆರಳಿದರು.