ಮಂಗಳೂರು ಫೆ16: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ದೇಶದ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಯು ಭಾರತೀಯರ ಮನಸ್ಸಿಗೆ ಕಠಿಣ ನೋವನ್ನುಂಟುಮಾಡಿದೆ. ದಾಳಿಗೆ ತಕ್ಕ ಪ್ರತ್ತ್ಯುತ್ತರ ನೀಡಬೇಂಕೆಂಬ ಕೂಗು ಕೇಳಿಬರುತ್ತಿದೆ. ಹೀಗಿರುವಾಗ ಉಗ್ರವಾದಿಗಳ ಬೆಂಬಲಕ್ಕೆ ನಿಂತಿರುವ ಪಾಕಿಸ್ಥಾನಕ್ಕೆ ಪ್ರಧಾನಿ ಮೋದಿಯವರು ದಿಟ್ಟ ಪ್ರತಿಕ್ರಿಯೆ ನೀಡುತ್ತಾರೆ ಎಂಬ ನಿರೀಕ್ಷೆಯಿದೆ. ಇದರ ಅನಿವಾರ್ಯತೆಯೂ ಇದೀಗ ಬಂದಿದೆ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ಅನಿವಾಸಿ ಉಧ್ಯಮಿ ಹರೀಶ್ ಶೇರಿಗಾರ್ ನಿರ್ಮಿಸುತ್ತಿರುವ "ಇಂಗ್ಲಿಷ್" ಚಿತ್ರದ ಚಿತ್ರೀಕರಣದ ವೇಳೆ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
1947 ರಲ್ಲಿ ಭಾರತ ಸ್ವತಂತ್ರವಾದಾಗ ಧರ್ಮದ ಹೆಸರಲ್ಲಿ ಪಾಕಿಸ್ಥಾನವೆಂಬ ದೇಶ ಹುಟ್ಟಿಕೊಂಡಿತು. ಆ ನಂತರ ಪದೇ ಪದೇ ಇಂತಹ ದಾಳಿಗಳು ನಡೆಯುತ್ತಲೇ ಇವೆ. ಭಾರತದೊಳಗೆ ಭಯದ ವಾತವರಣ ಹುಟ್ಟಿಸಿ ಅಸ್ಥಿರತೆಯನ್ನು ಸೃಶ್ಟಿ ಮಾಡುವುದೇ ಇಂತಹ ದಾಳಿಗಳ ಹಿಂದಿನ ಉದ್ದೇಶ. ಆದರೆ 1955 ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ 1971 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಇಂತಹ ದಾಳಿಗಳಿಗೆ ಸೂಕ್ತ ಉತ್ತರ ನೀಡಿ ಶತ್ರುಗಳಲ್ಲಿ ನಡುಕ ಹುಟ್ಟಿಸಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿಯವರು ಶಾಸ್ತ್ರಿ ಹಾಗೂ ಇಂದಿರಾ ಗಾಂಧಿಯ ನಡೆಯನ್ನು ಮೈಗೂಡಿಸಬೇಕಾಗಿದೆ. ಮೋದಿ ಇದಕ್ಕೆ ಸಮರ್ಥರು. ಕಾಶ್ಮೀರದ ವಿವಾದಿತ ಪ್ರದೇಶಗಳನ್ನು ಸೇನೆಗೆ ಒಪ್ಪಿಸಿ ಸ್ಥಳೀಯವಾಗಿ ಉಗ್ರವಾದಿಗಳಿಗೆ ಸಿಗುವ ನೆರವು ಶಾಶ್ವತವಾಗಿ ನಿಲ್ಲಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.