ಮೂಡುಬಿದಿರೆ, ಫೆ 17(SM): ಭಯೋತ್ಪಾದಕನ ದಾಳಿಯಿಂದ ಹುತಾತ್ಮರಾದ ಭಾರತೀಯ ಸೈನಿಕರಿಗೆ ಐಸಿವೈಯಂ ಮೂಡುಬಿದಿರೆ ಘಟಕದಿಂದ ಇಲ್ಲಿನ ಬಸ್ ನಿಲ್ದಾಣದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಐಸಿವೈಎಂ ಮೂಡುಬಿದಿರೆ ಘಟಕದ ನಿರ್ದೇಶಕ ರೆ.ಫಾ. ಫ್ರಾನ್ಸಿಸ್ ಕ್ರಾಸ್ತಾ ಪ್ರಾರ್ಥನೆಯನ್ನು ಸಲ್ಲಿಸಿದರು.
ಮೂಡುಬಿದಿರೆ ಪ್ರಧಾನ ಚರ್ಚ್ನ ರೆ.ಫಾ ಪೌಲ್ ಸಿಕ್ವೇರಾ ಮಾತನಾಡಿ, ಭಯೋತ್ಪಾದಕರ ಕೃತ್ಯ ನಮಗೆಲ್ಲರಿಗೂ ಆಘಾತ ತಂದಿದೆ. ದೇಶದ ಜನರಿಗೆ ಭದ್ರತೆ ನೀಡುವ ಸೈನಿಕರ ಬಲಿದಾನ ಸದಾ ಸ್ಮರಣೀಯವಾದರೂ ಈ ಕೃತ್ಯ ಅಮಾನವೀಯವಾಗಿದ್ದು ದೇಶದ ಜನತೆಯನ್ನು ಘಾಸಿ ಗೊಳಿಸಿದೆ. ಸೈನಿಕರನ್ನು ಆದರ್ಶರನ್ನಾಗಿಸಿ ನಾವೂ ತ್ಯಾಗಮಯವಾದ ಜೀವನವನ್ನು ಮಾಡಬೇಕೆಂದರು.
ಫಾದರ್ ರಾಕೇಶ್ ಮಥಾಯಸ್, ಐಸಿವೈಎಂ ಮೂಡುಬಿದಿರೆ ಘಟಕದ ಅಧ್ಯಕ್ಷ ಪ್ರಾನ್ಸಿಸ್ ಮೊಂತೆರೋ, ಮಾಜಿ ಸೈನಿಕರಾದ ಸ್ಟೀವನ್ ಕನ್ಸೆಸ್ಸೋ, ವಿಲ್ಸನ್ ತಾಕೋಡೆ ಸಹಿತ ಕ್ರೈಸ್ತರೂ, ಕ್ರೈಸ್ತೇತರರೂ ಕೂಡ ಉಪಸ್ಥಿತರಿದ್ದರು.