ಕಾಸರಗೋಡು,ಫೆ 18 (MSP) : ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣದ ಬಗ್ಗೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಅಪರಾಧ ದಳದ ಡಿವೈಎಸ್ ಪಿ ಪ್ರದೀಪ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಇನ್ನೊಂದೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಖಂಡಿಸಿ ಕಾಸರಗೋಡು ಜಿಲ್ಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಕೇರಳ ರಾಜ್ಯದಾದ್ಯಂತ ಯುವ ಕಾಂಗ್ರೆಸ್ ಕರೆ ನೀಡಿರುವ ಹರತಾಳ ಪ್ರಾರಂಭವಾಗಿದೆ.
ಕೃತ್ಯ ಖಂಡಿಸಿ ಸೋಮವಾರ ಮುಂಜಾನೆ ಕಾಸರಗೋಡು ನಗರದಲ್ಲಿ ಯುಡಿಎಫ್ ನಡೆಸಿದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ್ದು , ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದರು. ರಸ್ತೆ ಬದಿ ಅಳವಡಿಸಿದ್ದ ಸಿಪಿಎಂ- ಎಲ್ ಡಿಎಫ್ ನ ಪ್ರಚಾರ ಸಾಮಗ್ರಿಗಳನ್ನು ಧ್ವಂಸಗೊಳಿಸಿದರು
ಘಟನೆ ನಡೆದ ಪರಿಸರ ಹಾಗೂ ಕಾಸರಗೋಡು ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದು , ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಹರತಾಳದ ಹಿನ್ನಲೆಯಲ್ಲಿ ಬಸ್ಸುಗಳು ರಸ್ತೆಗಿಳಿದಿಲ್ಲ, ಕೆಲವೇ ಕೆಲ ವಾಹನಗಳು ಮಾತ್ರ ಸಂಚಾರ ನಡೆಸುತ್ತಿದೆ. ಭಾನುವಾರ ರಾತ್ರಿ ಪೆರಿಯ ಕಲ್ಯೊಟ್ ನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ (24) ಮತ್ತು ಶರತ್ ಲಾಲ್ (21)ರನ್ನು ಕೊಚ್ಚಿ ಕೊಲೆಗೈದಿತ್ತು. ಬೈಕ್ ಗೆ ಡಿಕ್ಕಿ ಜೀಪು ಡಿಕ್ಕಿ ಹೊಡೆಸಿ ಬಳಿಕ ಮಾರಾಕಾಸ್ತ್ರದಿಂದ ಇಬ್ಬರನ್ನು ಕೊಚ್ಚಿ ತಂಡವು ಪರಾರಿಯಾಗಿದ್ದು, ಕೃಪೇಶ್ ಸ್ಥಳದಲ್ಲೇ ಮೃತಪಟ್ಟರೆ ಶರತ್ ಲಾಲ್ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುವ ದಾರಿ ಮಧ್ಯೆ ಮೃತಪಟ್ಟರು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೃತ್ಯಕ್ಕೆ ಪೂರ್ವದ್ವೇಷ ಕಾರಣ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಸಿಪಿಎಂ ಮತ್ತು ಕಾಂಗ್ರೆಸ್ ರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡೂ ಪಕ್ಷದ ೧೧ ಮಂದಿಯನ್ನು ಬೇಕಲ ಪೊಲೀಸರು ಬಂಧಿಸಿದ್ದರು. ನ್ಯಾಯಾಂಗ ಬಂಧನ ಕಳೆದು ಎರಡು ದಿನಗಳ ಹಿಂದೆ ಇವರು ಬಿಡುಗಡೆಗೊಂಡಿದ್ದರು. ಪ್ರಕರಣದಲ್ಲಿ ಶರತ್ ಲಾಲ್ ಕೂಡಾ ಭಾಗಿಯಾಗಿದ್ದನು. ಈ ದ್ವೇಷ, ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಇಂದು ಕಾಸರಗೋಡಿಗೆ ಆಗಮಿಸಲಿದ್ದು , ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಹರತಾಳದ ಹಿನ್ನಲೆಯಲ್ಲಿ ಇಂದು ನಡೆಯಬೇಕಿದ್ದ ಎಸ್ ಎಸ್ ಎಲ್ ಸಿ ಮಾದರಿ ಪರೀಕ್ಷೆ ಹಾಗೂ ಇತರ ಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.