ಉಜಿರೆ,ಫೆ 18 (MSP): ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳವು ಅನ್ನದಾನ, ಅಭಯದಾನ, ವಿದ್ಯಾದಾನ ಮತ್ತು ಔಷಧಿದಾನ ಎಂಬ ಚತುರ್ವಿಧ ದಾನ ಪರಂಪರೆಯೊಂದಿಗೆ ಸಮಾಜಕ್ಕೆ ಅನುಪಮ ಕೊಡುಗೆ ನೀಡಿದೆ. ರಾಜ್ಯದ ಸರ್ವಧರ್ಮೀಯರೂ ಇಲ್ಲಿ ನೆರೆದಿದ್ದಾರೆ. ಈ ರೀತಿಯ ವಿಶಿಷ್ಟ ಆರಾಧನೆ ಅಪೂರ್ವವಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಪರವಾಗಿ ಭಕ್ತಿ ಪೂರ್ವಕ ಪ್ರಣಾಮಗಳೊಂದಿಗೆ ತಾನು ಈ ಸಮಾರಂಭದಲ್ಲಿ ಭಾಗವಹಿಸಿ ಶ್ರೀ ಮಂಜುನಾಥ ಸ್ವಾಮಿ ಹಾಗೂ ಭಗವಾನ್ ಬಾಹುಬಲಿಯ ದರ್ಶನ ಮಾಡಿ ಸಂತೋಷಪಟ್ಟಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು.
ಅವರು ಭಾನುವಾರ ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕ ವೀಕ್ಷಿಸಿದ ಬಳಿಕ ಮಾತನಾಡಿದರು.ಇಲ್ಲಿನ ಮೂಲಭೂತ ಸೌಕರ್ಯ ಒದಗಿಸಲು ಬೇಕಾದ ಹಣವನ್ನು ಸರ್ಕಾರದಿಂದ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಪ್ರಕಟಿಸಿದರು. ಅತ್ಯಂತ ಶ್ರದ್ಧಾ-ಭಕ್ತಿಯಿಂದ ಧರ್ಮಸ್ಥಳದ ಸೇವೆಗೆ ಸದಾ ಬದ್ಧರಾಗಿದ್ದೇವೆ ಎಂದು ಅವರು ಭರವಸೆ ನೀಡಿದರು.ಬಾಹುಬಲಿ ಮೂರ್ತಿ ಪ್ರತಿಷ್ಠಾಪಕರಾದ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬದವರು 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಬಾಹುಬಲಿ ತಾಳ್ಮೆ, ಸಂಯಮ, ಅಹಿಂಸೆ, ತ್ಯಾಗ ಮತ್ತು ಮನೋನಿಗ್ರಹದ ಪ್ರತೀಕ. ಆತನ ದರ್ಶನ, ಆರಾಧನೆ ಹಾಗೂ ಮಸ್ತಕಾಭಿಷೇಕದಿಂದ ಜೀವನದ ಸವಾಲುಗಳನ್ನು, ಕೌಟುಂಬಿಕ ಸಮಸ್ಯೆಗಳನ್ನು ತ್ಯಾಗ ಮತ್ತು ತಾಳ್ಮೆಯಿಂದ ಎದುರಿಸುವ ಧೈರ್ಯ ನಮ್ಮಲ್ಲಿಯೂ ಮೂಡಿ ಬರಲಿ ಎಂದು ಆಶಿಸಿದರು.ಅಂತರಂಗದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ದೇವರ ದರ್ಶನ ಮಾಡಿದಾಗ ಪ್ರತಿ ಬಾರಿಯೂ ಹೊಸತನ ಕಂಡು ಬರುತ್ತದೆ. ಅಪೂರ್ವ ಅನುಭವ ಹಾಗೂ ಅನುಭೂತಿ ಸಿಗುತ್ತದೆ ಎಂದು ಅವರು ಹೇಳಿದರು.ರಾಜ್ಯ ಸರ್ಕಾರ ಧರ್ಮಸ್ಥಳಕ್ಕೆ ನೇತ್ರಾವತಿ ಸ್ನಾನಘಟ್ಟದಿಂದ ಚತುಷ್ಪಥ ರಸ್ತೆ, ಬಾಹುಬಲಿ ಬೆಟ್ಟದ ಸುತ್ತ ವರ್ತುಲ ರಸ್ತೆ ಹಾಗೂ ಹೈಮಾಸ್ಟ್ ವಿದ್ಯುದ್ದೀಪ ಅಳವಡಿಕೆಗೆ ಅನುದಾನ ನೀಡಿ ಸಹಕರಿಸಿದೆ ಎಂದು ಕೃತಜ್ಞತೆಯನ್ನು ವ್ಯಕ್ತ ಪಡಿಸಿದರು.
ಧರ್ಮಸ್ಥಳದ ವತಿಯಿಂದ ಸಚಿವ ಸಾ.ರಾ. ಮಹೇಶ್ ಅವರನ್ನು ಹೆಗ್ಗಡೆಯವರು ಸನ್ಮಾನಿಸಿದರು.ಅಷ್ಟವಿಧಾರ್ಚನೆ ಪೂಜೆ, ಪಂಚ ನಮಸ್ಕಾರ ಮಂತ್ರ ಪಠಣ, ಜಿನ ಭಕ್ತಿಗೀತೆಗಳ ಸುಶ್ರಾವ್ಯ ಗಾಯನ, ಬಾಹುಬಲಿಯ ಭಜನೆ, ಸತ್ಯ, ಶಾಂತಿ, ತ್ಯಾಗದ ಸ್ಮರಣೆ, ಮಂಗಲ ದ್ರವ್ಯಗಳಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ, 120 ಮಂದಿ ದಿಗಂಬರ ಮುನಿಗಳು, ಅರ್ಯಿಕೆಯರು, ಕ್ಷುಲ್ಲಕರ ಪಾವನ ಸಾನ್ನಿಧ್ಯ ಹಾಗೂ ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿನ 15ಕ್ಕೂ ಮಿಕ್ಕಿ ಪೂಜ್ಯ ಭಟ್ಟಾರಕರುಗಳ ದಿವ್ಯ ಉಪಸ್ಥಿತಿ ಹಾಗೂ ಮಂಗಲ ಪ್ರವಚನ, ಶ್ರಾವಕ-ಶ್ರಾವಕಿಯರ ಗಡಣ - ಇತ್ಯಾದಿ ರತ್ನಗಿರಿಗೆ ದಿವ್ಯತೆಯನ್ನು ನೀಡಿತು. ಪ್ರೇಕ್ಷಕರಲ್ಲಿ ಭವ್ಯತೆಯನ್ನು ಮೂಡಿಸಿತು.
ಮಾಜಿ ಸಚಿವರುಗಳಾದ ವಿನಯ ಕುಮಾರ್ ಸೊರಕೆ, ಕೆ. ಅಭಯಚಂದ್ರ ಜೈನ್ ಮತ್ತು ಕೃಷ್ಣ ಜೆ. ಪಾಲೇಮಾರ್ ಉಪಸ್ಥಿತರಿದ್ದರು.ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ 1008 ಕಲಶಗಳಿಂದ ಮಹಾಮಸ್ತಕಾಭಿಷೇಕ ನಡೆಯಿತು. ಜಲಾಭಿಷೇಕ, ಎಳನೀರು, ಇಕ್ಷುರಸ (ಕಬ್ಬಿನ ಹಾಲು), ಹಾಲು, ಕಲ್ಕ ಚೂರ್ಣ, ಅರಶಿನ, ಕಷಾಯ, ಚತುಷ್ಕೋಣ ಕಲಶ, ಚಂದನ, ಅಷ್ಟಗಂಧದಿಂದ ಮಸ್ತಕಾಭಿಷೇಕ ನಡೆದ ವಿವಿಧ ಸಂದರ್ಭಗಳಲ್ಲಿ ವಿವಿಧ ಮನೋಹರ ಬಣ್ಣಗಳಿಂದ ಕಂಗೊಳಿಸುವ ಬಾಹುಬಲಿ ಮೂರ್ತಿಯನ್ನು ವೀಕ್ಷಿಸಿದ ಪ್ರೇಕ್ಷಕರು ಪುಣ್ಯಭಾಗಿಗಳಾಗಿ ಧನ್ಯತೆಯನ್ನು ಹೊಂದಿದರು.
ಧರ್ಮಸ್ಥಳದ ಧರ್ಮರಾಜ ಜೈನ್ ಮತ್ತು ಮಕ್ಕಳು ಎಳನೀರು ಅಭಿಷೇಕವನ್ನು ನೆರವೇರಿಸಿದರು.ಬೆಂಗಳೂರಿನ ಚಂದ್ರಕಲಾ ವಿ. ದಂಡಾವತಿ ಮತ್ತು ಕಡೂರಿನ ಬಾಹುಬಲಿ ದಂಡಾವತಿ ಇಕ್ಷುರಸ ಅಭಿಷೇಕ ಮಾಡಿದರು. ತುಮಕೂರಿನ ಸುರೇಶಬಾಬು ಮತ್ತು ಬೆಂಗಳೂರಿನ ಪ್ರಸನ್ನಯ್ಯ ಕ್ಷೀರಾಭಿಷೇಕ ನಡೆಸಿ ಧನ್ಯರಾದರು. ಮೂಡಬಿದ್ರೆ ಬೆಟ್ಕೇರಿಯ ಯಶೋದಾ ಮತ್ತು ಮಕ್ಕಳು ಕಲ್ಕಚೂರ್ಣ (ಅಕ್ಕಿನ ಹಿಟ್ಟಿನ) ಅಭಿಷೇಕ ನಡೆಸಿದರು.ಕಾರ್ಕಳದ ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಕುಟುಂಬದವರು ಅರಿಶಿನ ಅಭಿಷೇಕ ಮಾಡಿದರು.ಮಾಜಿ ಸಚಿವ ಮೂಡಬಿದ್ರೆಯ ಕೆ. ಅಭಯಚಂದ್ರ ಜೈನ್ ಮತ್ತು ಕುಟುಂಬದವರು ಕಷಾಯ ಅಭಿಷೇಕ ನೆರವೇರಿಸಿ ಧನ್ಯತೆಯನ್ನು ಹೊಂದಿದರು.ಹೊಂಬಣ್ಣ ಚಂದನದ ಅಭಿಷೇಕ ಮಾಡಿದರು. ಬ್ರಹ್ಮಕುಮಾರ ಬಿಳಗಿ, ಮಹೇಂದ್ರ ಕುಮಾರ್, ಪಡುಬಿದ್ರೆಯ ಶಾಂತಾ ಬಳ್ಳಾಲ್ ಮತ್ತು ಮಾಣಿಯ ಮಹಾವೀರ ಪ್ರಸಾದ್ ಕುಟುಂಬಸ್ಥರು ಚತುಷ್ಕೋನ ಕಲಶ ಅಭಿಷೇಕ ಮಾಡಿದರು.ಮೂಡಬಿದ್ರೆ ಚೌಟರ ಅರಮನೆ ಕುಲದೀಪ್ ಮತ್ತು ಕುಟುಂಬದವರು ಅಷ್ಟಬಂಧ ಅಭಿಷೇಕ ನಡೆಸಿದರೆ, ಬೆಳ್ತಂಗಡಿಯ ಪ್ರೊ. ಉದಯ ಕುಮಾರ್ ಮಲ್ಲ ಮತ್ತು ಕುಟುಂಬದವರು ಪುಷ್ಪವೃಷ್ಠಿ ನಡೆಸಿದರು.ಬೆಂಗಳೂರಿನ ವಿಕಾಸ್ ಜೈನ್ ಶಾಂತಿಧಾರಾ ಸೇವೆ ಮಾಡಿ ಕೃತಾರ್ಥರಾದರು.
ಸರ್ವಧರ್ಮಯರೂ ಮಸ್ತಕಾಭಿಷೇಕವನ್ನು ವೀಕ್ಷಿಸಿ ಧನ್ಯತೆ ಹೊಂದಿದರು.ಭಾನುವಾರ ರಜಾದಿನವಾಗಿದ್ದು, ಸುಮಾರು ಹದಿನೈದು ಸಾವಿರ ಭಕ್ತಾದಿಗಳು ಸೇರಿದ್ದರು.