ಮದ್ದೂರು ಅ 30: ಮದುವೆ ದಿಬ್ಬಣದ ಮಿನಿ ಲಾರಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಮೃತಪಟ್ಟು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಇಲ್ಲಿನ ತುಮಕೂರು-ಕೊಳ್ಳೇಗಾಲ ಹೆದ್ದಾರಿಯ ತೊರೆಶೆಟ್ಟಹಳ್ಳಿ ಬಳಿ ಭಾನುವಾರ ರಾತ್ರಿ ನಡೆದಿದೆ.ಹೀಗಾಗಿ ಮದುವೆ ಸಂಭ್ರಮದಲ್ಲಿದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಅವರಿಸಿದೆ. ಮೃತರನ್ನು ಮದ್ದೂರು ತಾಲೂಕಿನ ಯಡೇನಹಳ್ಳಿಯ, ಜಯಮ್ಮ (55), ಪಾರ್ವತಮ್ಮ (60),ಬೀರಮ್ಮ(50), ಮಾದಮ್ಮ(60), ಶಿವಣ್ಣ (45), ಸರೋಜಮ್ಮ (55) ಪೂಜಾ (16), ಶ್ರುತಿ (3) ಕಮಲಮ್ಮ(75), ಕರಿಯಪ್ಪ(56) , ಸೋನು ()ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಇಲ್ಲಿನ ಸ್ಥಳೀಯ ನಿವಾಸಿ ರಾಜಣ್ಣ ಎಂಬುವರ ಮಗಳ ವಿವಾಹವು ಶಿವಪುರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿತ್ತು. ಮದುವೆಗಾಗಿ ಸಂಬಂಧಿಕರನ್ನು ಮತ್ತು ಗ್ರಾಮಸ್ಥರನ್ನು ಮಿನಿ ಲಾರಿಯಲ್ಲಿ ಕರೆತರಲಾಗುತ್ತಿತ್ತು.ಅತಿ ವೇಗವಾಗಿ ಲಾರಿಯನ್ನು ಚಾಲಕ ಚಲಾಯಿಸಿದ ಪರಿಣಾಮ ರಸ್ತೆ ಬದಿಯಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದ್ದು, ತಕ್ಷಣ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕ್ಯಾಂಟರ್ ಚಾಲಕ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಎಂದು ಸ್ಥಳೀಯ ಆರೋಪಿಸಿದ್ದಾರೆ.ಘಟನೆಯಲ್ಲಿ ವಧುವಿನ ತಂಗಿ ಪೂಜಾ ಕೂಡಾ ಮೃತರಾಗಿದ್ದಾರೆ. ಇನ್ನು ಅಪಘಾತದಲ್ಲಿ ಮೃತಪಟ್ಟ ಕುಟುಂಬದ ಸದಸ್ಯರಿಗೆ 1 ಲಕ್ಷ ಪರಿಹಾರ ಸರ್ಕಾರದಿಂದ ಘೋಷಣೆ ಮಾಡಲಾಗಿದ್ದು ,ಪರಿಹಾರ ಮೊತ್ತವನ್ನು 5 ಲಕ್ಷಕ್ಕೆ ಹೆಚ್ಚಿಸುವಂತೆ ಪುಟ್ಟರಾಜು, ಶಾಸಕ ಡಿ.ಸಿ.ತಮ್ಮಣ್ಣ ಆಗ್ರಹಿಸಿದ್ದಾರೆ. ಚೆನ್ನಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.