ಕಾಸರಗೋಡು, ಫೆ 18 (MSP): ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆಗೆ ರಾಜಕೀಯ ವೈಷಮ್ಯವೇ ಪ್ರಮುಖ ಕಾರಣವಾಗಿದ್ದು, ಸಿಪಿಎಂ ಕಾರ್ಯಕರ್ತರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಹತ್ಯೆಯಲ್ಲಿ ಸ್ಥಳೀಯ ಸಿಪಿಎಂ ಮುಖಂಡರ ಷಡ್ಯಂತ್ರ ಇದ್ದು ಪೂರ್ವ ದ್ವೇಷದಿಂದ ಕೊಲೆ ನಡೆಸಿರುವ ಸಾಧ್ಯತೆ ಇದ್ದು ಎಫ್ ಐ ಆರ್ ದಾಖಲಿಸಲಾಗಿದೆ.
ಕೊಲೆಗೀಡಾದ ಕೃಪೇಶ್ ಮತ್ತು ಶರತ್ ಲಾಲ್ ರಿಗೆ ಸಿಪಿಎಂ ಸ್ಥಳೀಯ ಮುಖಂಡರಿಂದ ಕೊಲೆ ಬೆದರಿಕೆ ಇತ್ತು ಎಂದು ಪೊಲೀಸರಿಗೆ ಮಾಹಿತಿ ಲಭಿಸಿದೆ. ತನಿಖೆಯನ್ನು ಸ್ಥಳೀಯ ಸಿಪಿಎಂ ನಾಯಕರನ್ನು ಕೇಂದ್ರೀಕರಿಸಿ ನಡೆಯುತ್ತಿದೆ ಘಟನಾ ಸ್ಥಳದಿಂದ ಕೃತ್ಯಕ್ಕೆ ಬಳಸಿದನೆನ್ನಲಾದ ಒಂದು ಮಾರಕಾಸ್ತ್ರ , ಎರಡು ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಫಾರೆನ್ಸಿಕ್ , ಶ್ವಾನ ದಳ ಸಿಬಂದಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಕಲೆ ಹಾಕಿದೆ. ಹಂತಕರ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿದೆ ಎನ್ನಲಾಗಿದೆ.
ಕಣ್ಣೂರು ವಲಯ ಐ ಜಿ ಬಲರಾಂ ಕುಮಾರ್ ಉಪಾಧ್ಯಾಯ , ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಡಾ . ಎ . ಶ್ರೀನಿವಾಸ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕಾಗಮಿಸಿ ತನಿಖೆ ಹಾಗೂ ಭದ್ರತೆಯ ಬಗ್ಗೆ ವಿಶೇಷ ಗಮನಹರಿಸಿದ್ದಾರೆ.
ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಪಾರ್ಥೀವ ಶರೀರವನ್ನು ಪೆರಿಯಕ್ಕೆ ತರಲಾಗುತ್ತಿದ್ದು, ಐದು ಸ್ಥಳಗಳಲ್ಲಿ ಅಂತಿಮ ದರ್ಶನಕ್ಕಿಡಲಾಗುವುದು . ಸಂಜೆ ಐದು ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ . ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಮುಳ್ಳಪಲ್ಲಿ ರಾಮಚಂದ್ರನ್ , ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸೇರಿದಂತೆ ಮುಖಂಡರು ಕಾಸರಗೋಡಿಗೆ ತಲಪಿದ್ದಾರೆ.