ಕೊಣಾಜೆ, ಫೆ 18(SM): ಜನರಿಗಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದ ಬಳಿಕ ಚುನಾವಣೆ ಸಂದರ್ಭದಲ್ಲಿ ಮತ ಕೇಳುತ್ತೇವೆ. ಆದರೆ ಮತ ಕೊಡುವುದು ಅಥವಾ ಬಿಡುವುದು ನಿಮಗೆ ಬಿಟ್ಟ ವಿಚಾರ. ಮಾನವೀಯ ನೆಲೆಯಲ್ಲಿ ಕನಿಷ್ಟ ನಗುಮುಖವಾದರೂ ಇರಲಿ. ಮುಖ ತಿರುಗಿಸಿ ಶತ್ರುಗಳಂತೆ ನೋಡಬೇಡಿ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಅವರು, ಕೊಣಾಜೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಅಸೈಗೋಳಿಯಲ್ಲಿ ನಡೆದ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ಒಂದೇ ಕಡೆ ಇರುವ ಮನೆಗಳಿಗೆ ಭದ್ರತೆ ನೀಡುವ ಸರ್ಕಾರದ ಯೋಜನೆಯಂತೆ ಮಂಗಳೂರು ಕ್ಷೇತ್ರದಲ್ಲಿ ಕಳೆದ ವರ್ಷ ಹತ್ತು ಸಾವಿರ ಹಕ್ಕುಪತ್ರ ವಿತರಿಸಲಾಗಿದೆ ಎಂದು ಸಚಿವ ಖಾದರ್ ಹೇಳಿದರು.
ಈ ಸಂದರ್ಭ ಮೂಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.