ಕಾಸರಗೋಡು, ಫೆ 18(SM): ಕಾಸರಗೋಡಿನ ಪೆರಿಯದಲ್ಲಿ ಫೆಬ್ರವರಿ 17ರ ರಾತ್ರಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಹತ್ಯೆಗೀಡಾದ ಕೃಪೇಶ್ ನ ಮನೆ ಪರಿಸ್ಥಿತಿ ಮನಕಲಕುವಂತಿದೆ. ಬಡತನದಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಘನತೆಯಿಂದ ಬಾಳಬೇಕೆಂಬ ಆಸೆಗೆ ತನ್ನೀರಧಾರೆಯಾಗಿದೆ. ಪೆರಿಯ ಕಲ್ಯೊಟ್ ನಲ್ಲಿರುವ ಈ ಗುಡಿಸಲು ಕಂಡಾಗ ಕರುಳು ಚುರುಕ್ ಎನ್ನುತ್ತದೆ.
ಗುಡಿಸಲಲ್ಲೇ ಹುಟ್ಟಿ, ಬೆಳೆದು ಶ್ರಮಪಟ್ಟು ದುಡಿದು ಒಂದಿಷ್ಟು ಸಂಪಾದನೆಯಿಂದ ಕೃಪೇಶ್ ತನ್ನ ಕುಟುಂಬವನ್ನು ಸಲಹುತ್ತಿದ್ದರು. ಕಂಡು ಕೇಳರಿಯದ ಬಡತನ ಕೃಪೇಶ್ ಕುಟುಂಬಕ್ಕಿತ್ತು. ಆದರೂ ಹೇಗಾದರೂ ಕುಟುಂಬದ ನಿರ್ವಹಣೆಯಾಗುತ್ತಿತ್ತು. ಆದರೆ ಕೃಪೇಶ್ ದುಷ್ಕರ್ಮಿಗಳ ಮಚ್ಚಿನೇಟಿಗೆ ಎದೆಯೊಡ್ಡಿ ಬರ್ಬರವಾಗಿ ಹತ್ಯೆಯಾಗಿದ್ದಾರೆ.
ಒಂದೆಡೆ ಕೃಪೇಶ್ ನ ಬರ್ಬರ ಕೊಲೆಯನ್ನು ಅರಗಿಸಿಕೊಳ್ಳಲು ಮನೆಯವರಿಂದ ಅಸಾಧ್ಯವಾಗಿದೆ. ಇದರ ಜೊತೆಗೆ ಮನೆಯ ಪರಿಸ್ಥಿತಿ ಕಂಡಾಗ ಬೆಚ್ಚಿ ಬೀಳುವಂತೆ ಮಾಡಿದೆ. ಜೋಪಡಿಯಂತಿರುವ ಮನೆ ಇಂದೋ, ನಾಳೆಯೋ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಗುಡಿಸಲಿನಲ್ಲಿ ಕೃಪೇಶ್, ತಂದೆ, ತಾಯಿ, ಸಹೋದರಿಯರು ವಾಸವಾಗಿದ್ದಾರೆ.
ಕೃಪೇಶ್ ಪೈಂಟಿಂಗ್ ಕಾರ್ಮಿಕನಾಗಿದ್ದು, ತಂದೆ ಕೃಷ್ಣನ್, ತಾಯಿ ಬಾಲಮಣಿ ಹಾಗೂ ಇಬ್ಬರು ಸಹೋದರಿಯರು ಈ ಮನೆಯಲ್ಲಿ ವಾಸವಾಗಿದ್ದಾರೆ. ಆದರೆ ಮುಂದೆ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಕೃಪೇಶ್ ನನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ.
ಬಡ ಕುಟುಂಬದಲ್ಲಿ ಜೀವನ ಸಾಗಿಸುತ್ತಿದ್ದ ಕೃಪೇಶ್ ರಾಜಕೀಯದಲ್ಲಿ ಮೇಲೆದ್ದು ಬರುತ್ತಿದ್ದಂತೆ ರಾಜಕೀಯ ವೈಷಮ್ಯಕ್ಕೆ ಬಲಿಯಾಗಿ ದುರಂತ ಅಂತ್ಯವನ್ನು ಕಾಣುವಂತಾಗಿದೆ.