ಮಂಗಳೂರು, ಫೆ 18(SM): ನಾಲ್ವರು ಅಂತಾರಾಜ್ಯ ಸರಗಳ್ಳಿಯರನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತಮಿಳುನಾಡು ಮೂಲದ ಸೊಡಲ, ಹರಿಣಿ , ರೋಹಿಣಿ ಮತ್ತು ದಿವ್ಯ ಎಂದು ಗುರುತಿಸಲಾಗಿದೆ.
ಫೆಬ್ರವರಿ 17ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ರಾಲ್ ಗ್ರಾಮದ ಪಕ್ಷಿಕೆರೆ ಚಚ್೯ ಬಳಿ ರತ್ನ ಎಂಬವರ ಸುಮಾರು 3 ಪವನ್ ತೂಕದ ಬಂಗಾರದ ಹವಳದ ಸರವನ್ನು ಅಪರಿಚಿತ ನಾಲ್ವರು ಮಹಿಳೆಯರು ಕಸಿದುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ತಮಿಳುನಾಡು ರಾಜ್ಯದವರನ್ನು ಮುಲ್ಕಿ ಪೊಲೀಸ್ ನಿರೀಕ್ಷಕರಾದ ಅನಂತಪದ್ಮನಾಭ ಹಾಗೂ ಸಿಬ್ಬಂದಿಗಳು ದಸ್ತಗಿರಿ ಮಾಡಿದ್ದಾರೆ. ಬಂಧಿತರು ಸುಳಿಗೆ ಮಾಡಿರುವ ಸುಮಾರು 50,000 ರೂಪಾಯಿ ಮೌಲ್ಯದ 3 ಪವನ್ ತೂಕದ ಬಂಗಾರದ ಹವಳದ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿತರ ಮೇಲೆ ಈಗಾಗಲೇ ಕಾವೂರು, ಮಂಗಳೂರು ಉತ್ತರ ಪೊಲೀಸ್ ಠಾಣೆ, ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಸರ ಸುಲಿಗೆ ಪ್ರಕರಣ ದಾಖಲಾಗಿದ್ದು, ಕಾವೂರು ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ಸರ ಸುಲಿಗೆ ಪ್ರಕರಣವೊಂದರಲ್ಲಿ ಕಳೆದ 10 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದರು ಎಂಡು ತಿಳಿದು ಬಂದಿದೆ.