ಬೆಂಗಳೂರು ಅ 30: ಎಟಿಎಂಗೆ ತುಂಬಬೇಕಾಗಿದ್ದ ಹಣ ಕಳ್ಳರ ಪಾಲಾದ ಘಟನೆ ರಾಜ್ಯ ರಾಜಧಾನಿಯ ಜಾಲಹಳ್ಳಿ ಕ್ರಾಸ್ ಬಳಿ ಅ. 30 ರ ಸೋಮವಾರ ಬೆಳಗ್ಗೆ ನಡೆದಿದೆ. ಇಲ್ಲಿನ ಐಸಿಐಸಿಐ ಬ್ಯಾಂಕ್ ನ ಎಟಿಎಂಗೆ ಸೆಕ್ಯೂರ್ವೆಲ್ ಏಜೆನ್ಸಿಯ ಸಿಬ್ಬಂದಿಗಳು ಬಂದಾಗ ಬೈಕ್ ನಲ್ಲಿ ಬಂದ ಮೂವರು ದರೋಡೆಕೋರರು ದಾಳಿ ಮಾಡಿ ಸುಮಾರು 18 ಲಕ್ಷ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸೆಕ್ಯೂರ್ ವೆಲ್ ಏಜೆನ್ಸಿಯ ಸಿಬ್ಬಂದಿಗಳಾದ ಮೋಹನ್ ಹಾಗೂ ಸಾಗರ್ ಪ್ರತಿರೋಧ ತೋರಿದಾಗ ಚಾಕುವಿನಿಂದ ಇರಿದು ಹಣ ದೋಚಿದ್ದಾರೆ. ಇರಿತಕ್ಕೆ ಒಳಗಾದ ಮೋಹನ್ ಮತ್ತು ಸಾಗರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಂಚು ಹಾಕಿದ್ದ ಈ ದರೋಡೆಕೋರರು ಪಲ್ಸರ್ ಬೈಕ್ ನಲ್ಲಿ ಹೆಲ್ಮಟ್ ಧರಿಸಿ ಬಂದಿದ್ದರು ಎನ್ನಲಾಗಿದೆ.
ಎಟಿಎಂ ಗೆ ತುಂಬಲೆಂದು ಒಟ್ಟು 1 ಕೋಟಿ, 25 ಲಕ್ಷ ರೂ. ಹಣ ತಂದಿದ್ದರು ಎನ್ನಲಾಗಿದೆ. ಅದರಲ್ಲಿ 18.5 ಲಕ್ಷವನ್ನು ದರೋಡೆ ಮಾಡಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.