ಮಂಗಳೂರು,ಫೆ19 (MSP): ವೃದ್ದ ದಂಪತಿಗಳಿಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕೋಟೆಕಾರು ಬೀರಿಯಲ್ಲಿ ಫೆ.19 ರ ಮಂಗಳವಾರ ನಡೆದಿದೆ. ಮೃತರನ್ನು ಆಕಾಶವಾಣಿಯ ನಿವೃತ್ತ ಉದ್ಯೋಗಿ ದೇವರಾಜ್ ಗಾಣಿಗ (74) ಹಾಗೂ ಅವರ ಪತ್ನಿ ವಸಂತಿ(64)ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ವೆಂಕಪ್ಪ ಎಂಬವರು ಹಾಲು ನೀಡಲೆಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮೂಲತ: ಮಂಜೇಶ್ವರದವರಾಗಿರುವ ದಂಪತಿ ಸುಮಾರು 20 ವರ್ಷಗಳಿಂದ ಬೀರಿಯಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದರು.
ಮಕ್ಕಳಿರದ ಕೊರಗಿನಲ್ಲಿದ್ದ ಇಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ ಊಟ ಮುಗಿಸಿ ಇಬ್ಬರು ಮನೆ ಚಾವಡಿಯಲ್ಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ದೇವರಾಜ್ ಅವರು ಮಂಗಳೂರು ಆಕಾಶವಾಣಿಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಮಕ್ಕಳಿಲ್ಲದ ಕಾರಣ ದಂಪತಿಗೆ ಶ್ವಾನಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ದಂಪತಿ ಆತ್ಮಹತ್ಯೆ ಬಳಿಕ ಗೂಡಿನಲ್ಲಿದ್ದ ನಾಯಿ ಯಜಮಾನರ ಅಗಲುವಿಕೆಯಿಂದ ಮೂಕವಾಗಿ ರೋಧಿಸುತ್ತಿದೆ. ಇನ್ನು ತಮ್ಮ ಮನೆ ಹಾಗೂ ಜಾಗವನ್ನು ಮೃತ ವಸಂತಿ ಅವರ ಅಣ್ಣನ ಮಗಳು ಶ್ವೇತಾ ಎಂಬವರಿಗೆ ನೀಡುವಂತೆಯೂ ಡೆತ್ ನೋಟಲ್ಲಿ ಬರೆದಿಟ್ಟಿದ್ದಾರೆ. ಅಲ್ಲದೆ ಶ್ವಾನ ಮತ್ತು ಸಾಕು ಪ್ರಾಣಿಗಳನ್ನು ಅವರಲ್ಲೇ ಸಲಹುವಂತೆ ಮನವಿ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಎಸಿಪಿ ರಾಮರಾವ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಎಸ್.ಐ ವಿನಾಯಕ ತೋರಗಲ್ ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.