ಮೂಡುಬಿದಿರೆ, ಫೆ 19(SM): ಗುರು ಬಸದಿಯ ಸಿದ್ದಾಂತ ಮಂದಿರದ ಕಳವು ಪ್ರಕರಣದ ಪ್ರಮುಖ ಆರೋಪಿ ಸಂತೋಷ್ದಾಸ್ನನ್ನು ಮಂಗಳೂರು ಉತ್ತರ ಹಾಗೂ ಮೂಡುಬಿದಿರೆ ಠಾಣೆಯ ಪೋಲಿಸರು ಬಾಡಿ ವಾರೆಂಟ್ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
೨೦೧೩ರ ಜುಲೈ ೬ರಂದು ಇಲ್ಲಿನ ಸಿದ್ದಾಂತ ಮಂದಿರದಿಂದ ಕೋಟ್ಯಾಂತರ ಬೆಲೆಬಾಳುವ ವಿಗ್ರಹಗಳನ್ನು ಆರೋಪಿ ಸಂತೋಷ್ ದಾಸ್ ಕಳುವುಗೈದಿದ್ದ. ಕೆಲವೇ ತಿಂಗಳಲ್ಲಿ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಿದ್ದರು. ಸಂತೋಷ್ದಾಸ್ ಅವರ ಪತ್ನಿ ದೀಪ್ತಿ ಮೊಹಂತಿ ಪಟ್ನಾಯಕ್, ಮಾವ ದಿಗಂಬರ ಮೊಹಂತಿ, ವಜ್ರ ವ್ಯಾಪಾರಿ ರಾಜಾಜಿ ಅವರನ್ನು ಬಂಧಿಸಲಾಗಿತ್ತು. ಸಂತೋಷ್ದಾಸ್ ಕೂಡ ಒಟ್ಟು ೨೩ ಪ್ರತ್ಯೇಕ ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದು, ಉಳಿದ ಆರೋಪಿಗಳು ಕೂಡ ಜಾಮೀನು ಪಡೆದು ಹೊರಬಂದಿದ್ದಾರೆ.
ಆ ಬಳಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದು, ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಈತ ತಮಿಳುನಾಡಿನ ದೇವಸ್ಥಾನ ಒಂದರಲ್ಲಿ ಕಳವು ಕೃತ್ಯಕ್ಕೆ ಸಂಬಂಧಿಸಿದಂತೆ ಸೇಲಂ ಪೊಲೀಸರಿಂದ ಬಂಧಿತನಾಗಿದ್ದ. ಹೀಗಾಗಿ ಮಂಗಳೂರು ಉತ್ತರ ಮತ್ತು ಮೂಡುಬಿದಿರೆ ಪೊಲೀಸರು ಸೇಲಂ ನ್ಯಾಯಾಲಯದಲ್ಲಿ ಬಾಡಿ ವಾರಂಟ್ ಪಡೆದು ಸಂತೋಷ್ದಾಸ್ನನ್ನು ಮಂಗಳೂರಿಗೆ ಕರೆತಂದು ಸೋಮವಾರ ಮಂಗಳೂರಿನ ನ್ಯಾಯಾಲಯಕ್ಕೆ ಮತ್ತು ಸೋಮವಾರದಂದು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸಂತೋಷ್ದಾಸ್ ನ್ಯಾಯಾಲಯದ ವಿಚಾರಣೆಗೆ ಗೈರಾಗಿರುವುದರಿಂದ ನ್ಯಾಯಾಲಯ ವಾರೆಂಟ್ ಜಾರಿಮಾಡಿದ್ದು, ಸದ್ಯ ಆತ ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣಕ್ಕೆ ಸಂಬಂದಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಾನೆ.