ಮಂಗಳೂರು ಅ 30 : ಕೊರಗ ಸಮುದಾಯದ "ವೀರ ಪುರುಷ ಕೊರಗತನಿಯ"ನಿಗೆ ಅವಮಾನ ಮತ್ತು ಸಮುದಾಯದ ಮೇಲಿನ ಸಾಂಸ್ಕೃತಿಕ ದಾಳಿಯನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ ಪ್ರತಿಭಟನೆ ನಡೆಸಿತು. ಕೊರಗ ಸಮುದಾಯ ಅನಾದಿ ಕಾಲದಿಂದಲೂ ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿದ್ದು, ಇದೀಗ ಇದರ ಮುಂದುವರಿದ ಭಾಗವಾಗಿ ಇತ್ತೀಚೆಗೆ ಸಮುದಾಯದ ದೈವವನ್ನು ಕೀಳು ಅಭಿರುಚಿಯ ಭಾಷೆಯ ಬಳಸಿ ಅಂತರ್ಜಾಲ, ಫೇಸ್ ಬುಕ್ ನಲ್ಲಿ ನಿಂದಿಸುವುದು ಕಂಡುಬಂದಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಕೊರಗಜ್ಜ ನನ್ನು ಅವ್ಯಾಚ ಶಬ್ದಗಳಿಂದ ಹೀಯಾಳಿಸಿದ ಆಂಜೆಲ್ ನಯನಾ ಪ್ರಜ್ವಲ್ ಎನ್ನುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕೆಂದು ಪ್ರತಿಭಟನಕಾರರು ಒಕ್ಕೊರಲಿನಿಂದ ಒತ್ತಾಯಿಸಿದರು. ಜತೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕೊರಗಜ್ಜನ ಕೋಲದಲ್ಲಿ ವೇಷಧಾರಿಯು ಅಶ್ಲೀಲವಾಗಿ ಕುಣಿಯುಯುತ್ತಾರೆ ಇದಕ್ಕೆ ಸೂಕ್ತವಾದ ನಿರ್ದೇಶನಗಳನ್ನು ನೀಡಲು ಸಮಿತಿಯ ರಚನೆಯಾಗಬೇಕು ಎಂಬಿತ್ಯಾದಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರು.