ಬೆಳ್ತಂಗಡಿ ಫೆ 20(MSP): ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ನಾಲ್ಕೂರು ಗ್ರಾಮದ ಸೂಳಬೆಟ್ಟು ವ್ಯಾಪ್ತಿಯಲ್ಲಿ ಹರಿಯುತ್ತಿರುವ ಪಲ್ಗುಣಿ ನದಿಯ ದಡದಿಂದ ಅವ್ಯಾಹತವಾಗಿ ಕಳೆದ ಒಂದು ತಿಂಗಳಿನಿಂದ ಟಿಪ್ಪರ್ ಮೂಲಕ ಹೊಯಿಗೆ ಸಾಗಾಟ ನಡೆಯುತ್ತಿದೆ.
ಸಾಲ್ಬೊಟ್ಟು, ಬರಯದೇವಸ್ಥಾನದ ಸನಿಹದ ಪರಿಸರದಲ್ಲಿ, ಜೆಸಿಬಿಯನ್ನು ಹೊಳೆಗೆ ಇಳಿಸಿ ಟಿಪ್ಪರ್ಗೆ ತುಂಬಿಸಿ ಸಾಗಿಸಲಾಗುತ್ತಿದೆ. ಸ್ಥಳೀಯರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಗಣನೆಗೆ ತೆಗೆದುಕೊಳ್ಳದೇ ದಂಧೆ ನಡೆಯುತ್ತಿರುವುದು ನೋಡಿದರೆ ಇದಕ್ಕೆ ಪೋಲಿಸ್ ಇಲಾಖೆಯೂ ಕುಮ್ಮಕ್ಕು ನೀಡುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಅಲ್ಲದೆ ಎಚ್ಚರಿಕೆ ನೀಡಿದವರಿಗೆ ಎರಡು ಲೋಡ್ ಮರಳು ಹಾಕುವ ಆಮೀಷವನ್ನೂ ನೀಡುತ್ತಿರುವುದು ನಡೆಯುತ್ತಿದೆ. ಇನ್ನಾದರೂ ಗಣಿ ಇಲಾಖೆಯವರು ಈ ಬಗ್ಗೆ ಗಮನಕೊಟ್ಟು ಅಕ್ರಮ ದಂಧೆಯನ್ನು ನಿಲ್ಲಿಸಬೇಕಾದ ಅಗತ್ಯವಿದೆ.