ಕಾಸರಗೋಡು,ಫೆ 20(MSP): ಕಾಸರಗೋಡಿನ ಪೆರಿಯದ ಕಲ್ಯೋಟ್ ನಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಪಿಎಂ ಏರಿಯಾ ಲೋಕಲ್ ಮುಖಂಡನೋರ್ವನನ್ನು ತನಿಖಾ ತಂಡ ಬಂಧಿಸಿದೆ. ಸಿಪಿಎಂ ಪೆರಿಯ ಸ್ಥಳೀಯ ಸಮಿತಿ ಸದಸ್ಯ ಎ. ಪೀತಾಂಬರನ್ ನನ್ನು ತನಿಖಾ ತಂಡ ವಶಕ್ಕೆ ಪಡೆದಿದ್ದಾರೆ.
ಸದ್ಯ ಬಂಧಿತ ಆರೋಪಿಯನ್ನು ಸ್ಥಳ ಮಹಜರಿಗಾಗೆ ಪೆರಿಯಾಕ್ಕೆ ಕರೆ ತಂದಿರುವ ಪೊಲೀಸರು ಮಾರಕಾಸ್ತ್ರಗಳನ್ನು ಪತ್ತೆ ಹಚಲು ತನಿಖೆ ನಡೆಸುತ್ತಿದ್ದಾರೆ. ಈತ ಕೊಲೆಗೆ ಸಂಚು ನಡೆಸಿದ್ದ ಆರೋಪಿಯಾಗಿದ್ದಾನೆ. ಕೊಲೆಗೆ ಪೀತಾಂಬರನ್ ಪ್ರೇರಣೆ ನೀಡಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ. ಶ್ರೀನಿವಾಸ್ ತಿಳಿಸಿದ್ದಾರೆ. ಆರೋಪಿಯನ್ನು ಫೆಬ್ರವರಿ 20ರಂದು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಈತನನ್ನು ಮತ್ತೆ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಕಸ್ಟಡಿಯಲ್ಲಿರುವ ಉಳಿದ ಆರು ಮಂದಿಯನ್ನು ವಿಚಾರಣೆ ನಡೆಸಲಾಗುತ್ತಿದೆ.ಕೆಲವು ತಿಂಗಳ ಹಿಂದೆ ಸಿಪಿಎಂ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಈ ಸಂದರ್ಭದಲ್ಲಿ ಶರತ್ ಲಾಲ್ ಪೀತಾಂಬರನ್ ನ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಇದಕ್ಕೆ ಪ್ರತಿಕಾರವಾಗಿ ಪೀತಾಂಬರನ್ ಸಂಚು ನಡೆಸಿದ್ದಾಗಿ ತನಿಖಾ ತಂಡದ ಮುಖ್ಯಸ್ಥರು ತಿಳಿಸಿದ್ದಾರೆ. ಹಂತಕರು ಕೃತ್ಯಕ್ಕೆ ಬಳಸಿದ್ದ ವಾಹನವೊಂದನ್ನು ಪೆರಿಯ ಪಾಕದ ನಿರ್ಜನ ಪ್ರದೇಶದಿಂದ ಪೊಲೀಸರು ಕಸ್ಟಡಿಗೆ ತೆಗದುಕೊಂಡಿದ್ದಾರೆ. ಇನ್ನು ತನಿಖೆಯನ್ನು ಸಿಬಿಐ ಗೆ ಒಪ್ಪಿಸಬೇಕು ಮೊದಲಾದ ಬೇಡಿಕೆಗಳನ್ನು ಮುದಿಟ್ಟುಕೊಂಡು ಯುಡಿಎಫ್ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.