ಉಡುಪಿ ಅ 30: ಅಪಹರಣ ಪ್ರಕರಣಕ್ಕೆ ಸಂಬಂದಪಟ್ಟಂತೆ ಆರು ಮಂದಿ ಆರೋಪಿಗಳನ್ನು ಪೋಲಿಸರು ಇಂದು ಕಟಪಾಡಿಯ ಸಮೀಪದ ದೆಂದೂರುಕಟ್ಟೆ ಎಂಬಲ್ಲಿ ಬಂಧಿಸಿದ್ದಾರೆ. ದೆಂದೂರುಕಟ್ಟೆಯ ದೀಪಕ್(19), ದೀಕ್ಷೀತ್ (20),ಉಜ್ವಲ್ (20), ಸುಮತ್ (20), ಸತ್ಯರಾಜ್ (23) ಹಾಗೂ ನಿತೇಶ್ (28) ಬಂದಿತ ಆರೋಪಿಗಳು. ಅಕ್ಟೋಬರ್ 29 ರಂದು ಸಂಜೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ಕುರ್ಕಾಲಿನ ಶಿವಪ್ರಸಾದ್ ಮತ್ತು ಮಂಜುನಾಥ್ ಎಂಬವರನ್ನು ತಡೆದ ಆರೋಪಿಗಳು ಅವರಿಬ್ಬರನ್ನು ಅಪಹರಿಸಿ ಅಲೆವೂರು ನೆಹರೂ ಶಾಲೆಯ ಮೈದಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ರೀಪಿನಿಂದ ಹಲ್ಲೆ ನಡೆಸಿ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಆರೋಪಿಗಳ ವಿರುದ್ದ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತು. ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಪೋಲಿಸರು ಸಾಕಷ್ಟು ಶೋಧ ಕಾರ್ಯಾಚರಣೆ ನಡೆಸಿದ್ರೂ ಆರೋಪಿಗಳ ಸುಳಿವು ಸಿಕ್ಕಿರಲ್ಲಿಲ್ಲ. ಆರೋಪಿಗಳ ಸುಳಿವನ್ನು ಸಾರ್ವಜನಿಕರೊಬ್ಬರು ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ನೀಡಿದ್ದು ಇಂದು ಕಾರ್ಕಳ ಸಹಾಯಕ ಪೋಲಿಸ್ ಅಧೀಕ್ಷಕ ರಿಷಿಕೇಶ್ ಸೊನಾವಣೆ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ವಿ. ಎಸ್ ಹಾಲಮೂರ್ತಿ ರಾವ್ ಹಾಗೂ ಶಿರ್ವ ಪೋಲಿಸರ ಜಂಟಿ ಕಾರ್ಯಾಚರಣೆಯ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಸಫಲರಾಗಿದ್ದಾರೆ. ಆರೋಪಿಗಳ ಸುಳಿವಿನ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನವನ್ನು ಘೋಷಣೆ ಮಾಡಿರುವುದಾಗಿ ಜಿಲ್ಲಾ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ್ ತಿಳಿಸಿದ್ದಾರೆ.