ಉಡುಪಿ, ಫೆ 20(SM): 2 ತಿಂಗಳ ಹಿಂದೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಇದುವರೆಗೂ ಪತ್ತೆಯಾಗಿಲ್ಲ. ಮೀನುಗಾರರ ಕುಟುಂಬ ಸದಸ್ಯರು ಅವರ ಬರುವಿಕೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಮತ್ತಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಸದಸ್ಯ ಸತೀಶ್ ಕುಂದರ್ ಒತ್ತಾಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ಡಿ.15ರಂದು ಸುವರ್ಣ ತ್ರಿಭುಜ ಬೋಟ್ ಮಹಾರಾಷ್ಟ್ರದ ಮಾಲ್ವಾನ್ ಬಳಿ ನಾಪತ್ತೆಯಾಗಿತ್ತು. ಇದೇ ಸಮಯದಲ್ಲಿ ಐಎನ್ಎಸ್ ಕೊಚ್ಚಿ ನೌಕೆಯ ತಳಭಾಗಕ್ಕೆ ಹಾನಿಯಾಗಿತ್ತು. ಸಮುದ್ರದ ಆಳದಲ್ಲಿ ಶೋಧ ನಡೆಸಿದಾಗ 22 ಮೀಟರ್ ರೆಕ್ಕೆಯಾಕಾರಾದ ವಸ್ತು ಪತ್ತೆಯಾಗಿತ್ತು. ಆರಂಭದಲ್ಲಿ ಬೋಟ್ನದ್ದೇ ಅವಶೇಷ ಎನ್ನಲಾಗಿತ್ತು. ಬಳಿಕ ಅದೊಂದು ಕಲ್ಲುಬಂಡೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ, ಐಎನ್ಎಸ್ ಕೊಚ್ಚಿ ನೌಕೆಗೆ ಡಿಕ್ಕಿ ಹೊಡೆದಿದ್ದು ಏನು ಎಂಬ ಸತ್ಯ ಬಹಿರಂಗಪಡಿಸಬೇಕು ಎಂದು ಕುಂದರ್ ಒತ್ತಾಯಿಸಿದರು.