ಕಾರ್ಕಳ ಅ 30 : ದೇಶದಲ್ಲಿ ಸಮಗ್ರ ತಾಲೂಕುಗಳೂ ಅಭಿವೃದ್ಧಿ ಹೊಂದುತ್ತಿದೆ. ಪ್ರತಿಯೊಂದು ಗ್ರಾಮಗಳ ರಸ್ತೆಗಳು ಬದಲಾಗುತ್ತಿದೆ. ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಿದೆ. ಒಬ್ಬ ವಿರೋಧ ಪಕ್ಷದ ಶಾಸಕನಾಗಿ ಕಾರ್ಕಳಕ್ಕೆ ಅತೀ ಹೆಚ್ಚು ಅನುದಾನ ತರುವಲ್ಲಿ ನಿರಂತರ ಶ್ರಮ ವಹಿಸಿದ್ದೇನೆ. ರಾಜ್ಯ ಸರಕಾರದ ಅನುದಾನದಿಂದ ಮಾತ್ರವಲ್ಲದೆ ಕೇಂದ್ರ ಸರಕಾರದ ಹೆಚ್ಚಿನ ಅನುದಾನ ಕಾರ್ಕಳ ಕ್ಷೇತ್ರಕ್ಕೆ ಮಂಜೂರು ಮಾಡಿಸಿ ಪ್ರತೀ ಗ್ರಾಮಗಳಿಗೂ ಹೊಸ ರಸ್ತೆಗಳ ನಿರ್ಮಾಣದೊಂದಿಗೆ ನಿರಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ವಿ.ಸುನೀಲ್ಕುಮಾರ್ ಹೇಳಿದರು.
ಕೇಂದ್ರ ಸರಕಾರದ ’ರಸ್ತೆ ನಿಧಿ’ ಯೋಜನೆಯಿಂದ ರೂ. 6.00 ಕೋಟಿ ಮಂಜೂರುಗೊಳಿಸಿ ತಾಲೂಕಿನ ಬೈಲೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪಳ್ಳಿಯಿಂದ ಬೈಲೂರು ಸಂಪರ್ಕ ರಸ್ತೆಯ ಅಗಲೀಕರಣ ಕಾಮಗಾರಿಗೆ ಶಾಸಕ ವಿ.ಸುನೀಲ್ಕುಮಾರ್ ಚಾಲನೆ ನೀಡಿ ಅವರು ಮಾತನಾಡಿದರು. ಶಾಸಕರ ವಿಶೇಷ ಪ್ರಯತ್ನದಿಂದ ಕಿಂಡಿ ಅಣೆಕಟ್ಟುಗಳು, 94 ಸಿ ಹಕ್ಕು ಪತ್ರ ವಿತರಣೆ, ಪರಿಸತ ಉತ್ಸವ, ಇಂಗುಗುಂಡಿ ರಚನೆ, ಉದ್ಯೋಗ ಮೇಳ, ಇಂತಹ ವಿಭಿನ್ನ ಕಾರ್ಯಕ್ರಮಗಳಿಂದ ಕಾರ್ಕಳ ಅಭಿವೃದ್ಧಿ ಹೊಂದುತ್ತಿದೆ. ವಿಶೇಷವಾಗಿ ರಿಕ್ಷಾ ಚಾಲಕರಿಗೆ ವಿಕಾಸ ಸೇವಾ ಸಂಸ್ಥೆಯ ವತಿಯಿಂದ ಹೆಲ್ತ್ ಕಾರ್ಡ್ ವಿತರಣೆ ಮಾಡುವ ಮೂಲಕ ಸರ್ವ ಜನತ ಆಶೋತ್ತರಗಳಿಗೆ ಅವರು ಸ್ವಂದಿಸಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ ಬೈಲೂರು ಹೇಳಿದರು.
ಪಳ್ಳಿ, ಕೌಡೂರು, ನೀರೆ, ಕಣಜಾರು ಗ್ರಾಮಗಳ ನಾಗರಿಕರ ಬಹುದಿನಗಳ ಬೇಡಿಕೆಗೆ ಶಾಸಕ ವಿ.ಸುನೀಲ್ ಕುಮಾರ್ ಸ್ವಂದಿಸಿದರು. ವಿಶ್ವನಾಥ್ ಭಟ್ ಭೂಮಿ ಪೂಜೆಯ ವಿಧಿ ವಿಧಾನಗಳನ್ನು ನೆರವೇರಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ವಿದ್ಯಾ ಎಂ. ಸಾಲ್ಯಾನ್, ಗ್ರಾಮ ಪಂಚಾಯತ್ ಅಧ್ಯಕ್ಷರುಗಳಾದ ಪಳ್ಳಿ ಸಂಗೀತಾ ನಾಯಕ್, ಕೌಡೂರು ಶ್ವೇತಾ ಶೆಟ್ಟಿ, ನೀರೆ ಸದಾನಂದ ನಾಯಕ್, ಎರ್ಲಪಾಡಿ ವಸಂತ ಕುಲಾಲ್, ಕೌಡೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಗದೀಶ್ ಪೂಜಾರಿ, ಇಂಜಿನಿಯರ್ ಇಕ್ಬಾಲ್ ಅಹಮ್ಮದ್, ಉದ್ಯಮಿ ಸುಧೀರ್ ಹೆಗ್ಡೆ, ಅರ್ಚಕರಾದ ವಿಶ್ವನಾಥ್ ಭಟ್ ಉಪಸ್ಥಿತರಿದ್ದರು.