ಕುಂದಾಪುರ,ಫೆ 21(MSP): ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಕರಾವಳಿಯಲ್ಲಿ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇದನ್ನು ತಡೆಯಲು ಹೋದ ವ್ಯಕ್ತಿಗಳಿಗೆ ಮಾರಣಾಂತಕ ಹಲ್ಲೆ ಪ್ರಕರಣಗಳೂ ಬೆಳಕಿಗೆ ಬರುತ್ತಿದೆ. ಕೋಟ ಪೊಲೀಸ್ ಠಾಣೆಯ ವ್ಯಾಪ್ತಿಯ ನೆಂಚಾರಿನಲ್ಲಿ ಖಾಸಗೀ ವ್ಯಕ್ತಿಯೊಬ್ಬರ ಸ್ಥಳದೊಳಗೆ ನುಗ್ಗಿ ಅಕ್ರಮ ಮರಳುಗಾರಿಕೆ ನಡೆಸಿದ್ದಲ್ಲದೇ ತಡೆಯಲು ಹೋದ ಕಾವಲುಗಾರನಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಆತನ ತಂಡ ಹಲ್ಲೆ ನಡೆಸಿದ ಘಟನೆ ನಡೆದಿದೆ.
ನೆಂಚಾರು ಎಂಬಲ್ಲಿ ಸೀತಾನದಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿಯ ಮುಖಂಡ ಪ್ರತಾಪ ಶೆಟ್ಟಿ ಮಾರಾಳಿ ನೇತೃತ್ವದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಗಣಿ ಅಧಿಕಾರಿಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಬಲಾತ್ಕಾರವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.
ಗೋಳಿಯಂಗಡಿ ಸಮೀಪದ ನೆಂಚಾರು ಎಂಬಲ್ಲಿ ನಿಶಾ ಫ್ರಾನ್ಸಿಸ್ ಹಾಗೂ ಫ್ರಾನ್ಸಿಸ್ ಜಾರ್ಜ್ ಎಂಬವರಿಗೆ ಸೇರಿದ್ದ ಸರ್ವೇ ನಂಬರ್ ೧೨೧ರಲ್ಲಿ ೧೦ಎಕರೆ ಜಾಗದಲ್ಲಿ ಜಾರ್ಜ್ ರಬ್ಬರ್ ಕೃಷಿ ನಡೆಸುತ್ತಿದ್ದರು. ಈ ಜಾಗದ ಸಮೀಪವೇ ಸೀತಾ ನದಿ ಹರಿಯುತ್ತಿದ್ದು, ಇದೇ ಸ್ಥಳದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಅಲ್ಲದೇ ಜಾರ್ಜ್ ಅವರ ತೋಟದೊಳಗೆ ಅಕ್ರಮವಾಗಿ ಪ್ರವೇಶಿಸಿ ಟಿಪ್ಪರ್ ಮೂಲಕ ಮರಳನ್ನು ಸಾಗಿಸಲಾಗುತ್ತಿತ್ತೆನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ರಬ್ಬರ್ ತೋಟದ ಕಾವಲುಗಾರ ಸುಧೀರ್ ಶೆಟ್ಟಿ ಜಾಗದ ಮಾಲಕರ ಗಮನಕ್ಕೆ ತಂದಿದ್ದರು. ಗೇಟಿಗೆ ಬೀಗ ಅಳವಡಿಸಿದ್ರೂ ಅದನ್ನು ಮುರಿದು ಮರಳು ಸಾಗಿಸುತ್ತಿದ್ದರು. ಮತ್ತೆ ಪುನಃ ಬೀಗ ಹಾಕಲಾಗಿತ್ತು.
ಜಾರ್ಜ್ ತೋಟದ ರಕ್ಷಣೆಗಾಗಿ ಗೆಟ್ ಅಳವಡಿಸಿದ್ದರೂ ಅದರ ಬೀಗವನ್ನು ಮುರಿದು ಜೆಸಿಬಿ ಹಾಗೂ ಟಿಪ್ಪರ್ನ್ನು ಒಳ ನುಗ್ಗಿಸಿ ಮರಳು ಸಾಗಿಸುತ್ತಿದ್ದುದನ್ನು ಗಮನಿಸಿದ ಕಾವಲುಗಾರ ವಾಹನವನ್ನು ತಡೆದಾಗ, ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಪ್ರವೀಣ್ ಹೆಗ್ಡೆ ಮಾರಾಳಿ, ವಿಜಯ ಶೆಟ್ಟಿ ಗೋಳಿಯಂಗಡಿ ಸೇರಿದಂತೆ ಹಲವರು ಸೇರಿ ಕಾವಲುಗಾರ ಸುಧೀರ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಾರ್ಜ್ ಸ್ನೇಹಿತ ರಮೇಶ್ ಶೆಟ್ಟಿ ಎಂಬವರಿಗೂ ಬೆದರಿಸಿ ಅಲ್ಲಿಂದ ಮರಳು ತುಂಬಿದ ಟಿಪ್ಪರ್ ಸಮೇತ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಕ್ರಮ ಮರಳುಗಾರಿಕೆಗೆ ಗಣಿ ಇಲಾಖೆ ಒಳ ಒಪ್ಪಂದ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಅಕ್ರಮ ಮರಳುಗಾರಿಕೆ ಸ್ಥಗಿತಗೊಳಿಸದೇ ಇದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಸ್ಥಳೀಯ ಗ್ರಾಮಸ್ಥರು ಎಚ್ಚರಿಕೆ ನೀಡಿರುವುದಾಗಿ ತಿಳಿದು ಬಂದಿದೆ.