ಮಂಗಳೂರು,ಫೆ 21(MSP): ನನ್ನ ಗ್ರಹಚಾರ ಕೆಟ್ಟಿದೆಯೋ ಅಥವಾ ನವಯುಗ ಕಂಪನಿಯದ್ದೋ ತಿಳಿದಿಲ್ಲ. ಒಮ್ಮೊಮ್ಮೆ ಶನಿ ದೆಸೆ ತಿರುಗುವುದಿದೆ, ಹೀಗಾಗಿ ಯಾಕೋ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡ ಎಲ್ಲಾ ಕೆಲಸವನ್ನು ಅತ್ಯಂತ ವೇಗವಾಗಿ ಪೂರ್ಣಗೊಳಿಸಿದ ನವಯುಗ ಕಂಪನಿಗೆ ಪಂಪ್ ವೆಲ್ ಮೇಲ್ಸೇತುವೆಯನ್ನು ಪೂರ್ಣಗೊಳಿಸಲಾಗುತ್ತಿಲ್ಲ ಆದರೂ ಈ ಎರಡು ಮೇಲ್ಸೇತುವೆಗಳನ್ನು ವರ್ಷಾಂತ್ಯದೊಳಗೆ ಮುಗಿಸುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ನಗರದಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ತಲಪಾಡಿಯಿಂದ ಕುಂದಾಪುರದ ಕಾಮಗಾರಿಗಳನ್ನು ’ ಬಿಓಟಿ’ (ಬಿಲ್ಡ್ ಆಪರೇಟ್ ಟ್ರನ್ಸ್ ಪರ್) ಆಧಾರದಲ್ಲಿ ನವಯುಗ ಸಂಸ್ಥೆಗೆ ನೀಡಿದ್ದೇವೆ. ಈ ಒಪ್ಪಂದದ ಪ್ರಕಾರ ನವಯುಗ ಸಂಸ್ಥೆಯೇ ಕಾಮಗಾರಿಗೆ ಹಣ ಹಾಕಿ , ಕಾಮಗಾರಿ ಮುಗಿಸಿ, 35 ವರ್ಷಗಳ ಕಾಲ ಟೋಲ್ ಗೇಟ್ ಹಣ ಸಂಗ್ರಹಿಸಿ ಬಳಿಕ ಸರ್ಕಾರಕ್ಕೆ ಬಿಟ್ಟುಕೊಡಬೇಕು ಎನ್ನುವುದು ಒಡಂಬಡಿಕೆಯ ಸಾರ. ಈ ಒಪ್ಪಂದದಂತೆ ನವಯುಗ ಕಂಪನಿ ಆರಂಭದಲ್ಲಿ ಕಾಮಗಾರಿ ವೇಗವಾಗಿ ಮಾಡಿ ಮುಗಿಸಿದೆ. ಇದಕ್ಕೆ ಉಳ್ಳಾಲ ಹಾಗೂ ಪಾವಂಜೆ ಸೇತುವೆ ಉತ್ತಮ ಉದಾಹರಣೆ. ಗ್ರಹಚಾರ ನನ್ನದು ಕೆಟ್ಟಿದೆಯೋ ಅಥವಾ ನವಯುಗ ಕಂಪನಿಯ ಗ್ರಹಚಾರ ಕೆಟ್ಟಿದೆಯೋ ಗೊತ್ತಿಲ್ಲ ಎಲ್ಲವನ್ನು ಶೀಘ್ರವಾಗಿ ಮಾಡಿ ಮುಗಿಸಿದ ನವಯುಗ ಕಂಪನಿಗೆ ದುರಾದೃಷ್ಟವಶತ್ ತೊಕ್ಕೊಟ್ಟು ಹಾಗೂ ಪಂಪ್ ವೆಲ್ ಮೇಲ್ಸೇತುವೆಯನ್ನು ಸರಿಯಾದ ಸಮಯದಲ್ಲಿ ಮುಗಿಸಲಾಗುತ್ತಿಲ್ಲ ಎಂದರು.
ಇನ್ನು ಪಂಪವೆಲ್ ಕಾಮಗಾರಿ ತಡವಾಗಲೂ ಕಾರಣವೂ ಇದೆ, ಈ ಬಗ್ಗೆ ನನ್ನ ಹತ್ರ ಆದೇಶ ಪತ್ರಗಳಿವೆ, ಸರ್ಕಾರದ ಅಂಕಿ ಅಂಶಗಳಿವೆ. ಮಹಾನಗರ ಪಾಲಿಕೆ ಒಡಂಬಡಿಕೆ ಮಾಡಿಕೊಂಡು ಪಂಪ್ ವೆಲ್ ನಲ್ಲಿದ್ದ ಮಹಾವೀರ ಸರ್ಕಲ್ ಮ್ಮು ನವಯುಗ ಕಂಪನಿಗೆ ಬಿಟ್ಟು ಕೊಡಬೇಕಿತ್ತು. ಆ ಬಳಿಕ ಅದರ ಸ್ಥಳಾಂತರ ಪ್ರಕ್ರಿಯೆ ನಡೆಯಬೇಕಿತ್ತು. ಈ ಪ್ರಕ್ರಿಯೆ 2016 ರವರೆಗೆ ನಡೆಯದೆ ಬಹಳಷ್ಟು ತಡ ಆಯಿತು. ಅಷ್ಟರೊಳಗೆ ನವಯುಗ ಸಂಸ್ಥೆ ಆರ್ಥಿಕ ನಷ್ಟ ಅನುಭವಿಸಿ ಮುಳುಗಿಬಿಟ್ಟಿತು. ಇದಲ್ಲದೆ ನವಯುಗ ಸಂಸ್ಥೆಗೆ ಬಿಓಟಿ ಆದ ಕಾರಣ ಒಂದಷ್ಟು ಸಮಸ್ಯೆಗಳು ಇವೆ. ಇವೆಲ್ಲವನ್ನು ಪರಿಹರಿಸಲಾಗುತ್ತಿದೆ.
ಫೆ ೨೬ ರಂದು ಜತೆ ಕಾರ್ಯದರ್ಶಿ ನಗರಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ಪರಿಶೀಲಿಸಿ ಕಾಮಗಾರಿಗೆ ಚುರುಕು ಮುಟ್ಟಿಸುತ್ತಾರೆ. ಹೀಗಾಗಿ ತೊಕ್ಕೊಟ್ಟು ಮತ್ತು ಪಂಪ್ ವೆಲ್ ಮೇಲ್ಸೇತುವೆ ವರ್ಷಾಂತ್ಯದೊಳಗೆ ಮುಗಿಸುತ್ತೇವೆ ಎಂದು ಅವರು ಭರವಸೆ ನೀಡಿದರು.