ಕಾಸರಗೋಡು, ಅ30 : ಕೇಂದ್ರ - ರಾಜ್ಯ ಸರಕಾರಗಳ ಜನವಿರೋಧಿ ನೀತಿಯನ್ನು ಪ್ರತಿಭಟಿಸಿ ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ನೇತೃತ್ವದ ರಾಜ್ಯ ಮಟ್ಟದ ' ಯುದ್ಧ ಸನ್ನದ್ಧ ' ಯಾತ್ರೆ ನವೆಂಬರ್ ಒಂದರಂದು ಉಪ್ಪಳದಿಂದ ಹೊರಡಲಿದ್ದು , ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದೆ ಎಂದು ಯು ಡಿ ಎಫ್ ಜಿಲ್ಲಾ ನಾಯಕರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನವಂಬರ್ ಒಂದರಂದು ಸಂಜೆ ನಾಲ್ಕು ಗಂಟೆಗೆ ಉಪ್ಪಳದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಖಾತೆ ಮಾಜಿ ಸಚಿವ ಎ. ಕೆ ಆಂಟನಿ ಯಾತ್ರೆಗೆ ಚಾಲನೆ ನೀಡುವರು .ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ , ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಘಳ್ , ಎಂ . ಎಂ ಹಸನ್, ಕೆ .ಪಿ . ಎ ಮಜೀದ್ , ಎಂ .ಪಿ ವೀರೇಂದ್ರ ಕುಮಾರ್ , ಎಂ . ಕೆ ಪ್ರೇಮಚಂದ್ರನ್ , ಅನೂಪ್ ಜೇಕಬ್ , ಸಿ .ಪಿ ಜೋನ್ , ಯು ಡಿ ಎಫ್ ಸಂಸದರು , ಶಾಸಕರು , ಮುಖಂಡರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ ಐದು ಗಂಟೆಗೆ ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಲ್ಲಿ ಜಾಥಾಕ್ಕೆ ಸ್ವಾಗತ ನೀಡಲಾಗುವುದು.
ಎರಡರಂದು ಬೆಳಿಗ್ಗೆ9.30 ಕ್ಕೆ ಚಟ್ಟಂಚಾಳ್ , 11.30 ಕ್ಕೆ ತ್ರಿಕ್ಕರಿಪುರ , ಮೂರು ಗಂಟೆಗೆ ತ್ರಿಕ್ಕರಿಪುರದಲ್ಲಿ ಜಾಥಾಕ್ಕೆ ಸ್ವಾಗತ ನೀಡಲಾಗುವುದು. ವಿವಿಧ ಕೇಂದ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಯು ಡಿ ಎಫ್ ನ ಪ್ರಮುಖ ನಾಯಕರು ಪಾಲ್ಗೊಳ್ಳುವರು.
ಜಾಥಾ ಡಿ. ಒಂದರಂದು ತಿರುವನಂತಪುರದಲ್ಲಿ ಕೊನೆಗೊಳ್ಳಲಿದ್ದು , ಎ ಐ ಸಿ ಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು
ಸುದ್ದಿಗೋಷ್ಠಿಯಲ್ಲಿ ಯು ಡಿ ಎಫ್ ಜಿಲ್ಲಾ ಸಂಚಾಲಕ ಚೆರ್ಕಳಂ ಅಬ್ದುಲ್ಲ, ಕೆ ಪಿ ಸಿ ಸಿ ಕಾರ್ಯದರ್ಶಿ ಕೆ . ನೀಲಕಂಠನ್ , ಕರಿವೆಳ್ಳೂರು ವಿಜಯನ್ ಮೊದಲಾದವರು ಉಪಸ್ಥಿತರಿದ್ದರು.