ಮಂಗಳೂರು, ಫೆ 21(SM): ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಧ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿಕೆಗೆ ಮುಸ್ಲಿಂ ಸಮುದಾಯ ಆಕ್ರೋಶಗೊಂಡಿದೆ. ಮುಂದಿನ ಲೋಕಸಭೆ ಚುನಾವಣೆಗೆ ದ.ಕ. ಹಾಗೂ ಉಡುಪಿ ಜಿಲ್ಲೆಯಿಂದ ಆಕಾಂಕ್ಷಿಯಾಗಿರುವ ಸೊರಕೆಯವರಿಗೆ ಪಕ್ಷ ಟಿಕೆಟ್ ನೀಡಬಾರದೆಂದು ಮಂಗಳೂರಿನಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಮೇಯರ್ ಅಶ್ರಪ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಯ ಕುಮಾರ್ ಸೊರಕೆ ಬದಲು ಯಾವುದೇ ವ್ಯಕ್ತಿಯನ್ನು ಲೋಕಸಭೆ ಚುನಾವಣಾ ಸ್ಪರ್ಧೆಗೆ ಆಯ್ಕೆ ಮಾಡಿ. ಬೇರೆ ಯಾರನ್ನೂ ಕೂಡ ನಾವು ವಿರೋಧಿಸುವುದಿಲ್ಲ. ಆದರೆ ಸೊರಕೆಯವರಿಗೆ ಟಿಕೆಟ್ ನೀಡುವುದಕ್ಕೆ ನಮ್ಮ ವಿರೋಧವಿದೆ.
ಒಂದೊಮ್ಮೆ ಸೊರಕೆಯವರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ತೀವ್ರ ಸ್ವರೂಪದ ಹೋರಾಟ ಮಾಡಲಾಗುವುದು. ಅಲ್ಲದೆ ಸೊರಕೆ ವಿರುದ್ಧ ಸಮುದಾಯದಿಂದ ಪರ್ಯಾಯ ಅಭ್ಯರ್ಥಿಯನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.