ಉಪ್ಪಿನಂಗಡಿ,ಫೆ 22(MSP): ಆನ್ ಲೈನ್ ವ್ಯವಹಾರದಲ್ಲಿ ವಂಚನೆಗೊಳಗಾಗಿ ತನ್ನ ಬ್ಯಾಂಕ್ ಖಾತೆಯಿಂದ 44 ಸಾವಿರ ರೂ.ವನ್ನು ಕಳೆದುಕೊಂಡು ಪುತ್ತೂರು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಫ್ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾರ್ಯ ನಿಮಿತ್ತ ಪೂನಾಗೆ ತೆರಳಿದ್ದ ತೌಸೀಫ್ ಅವರಿಗೆ ತುರ್ತು ಮೀಟಿಂಗ್ ನಲ್ಲಿ ಭಾಗವಹಿಸಲು ಬೆಂಗಳೂರಿಗೆ ಬರಬೇಕೆಂಬ ಸೂಚನೆ ಬಂದ ಹಿನ್ನಲೆಯಲ್ಲಿ ಮಂಗಳೂರಿಗೆಂದು ಬುಕ್ ಮಾಡಲಾಗಿದ್ದ ಬಸ್ ಟಿಕೇಟ್ ನ್ನು ರದ್ದು ಮಾಡಿ ಬೆಂಗಳೂರಿಗೆ ಬದಲಾಯಿಸಬೇಕೆಂದು ಆನ್ ಲೈನ್ ಮೂಲಕ ಸಂಬಂಧಿತ ಏಜೆನ್ಸಿಯನ್ನು ವಿನಂತಿಸಿಕೊಂಡಿದ್ದರು. ಟಿಕೆಟ್ ಬದಲಾವಣೆಯ ಪ್ರಕ್ರಿಯೆ ಬ್ಯಾಂಕ್ ಖಾತೆಯ ಮೂಲಕ ನಡೆಯಬೇಕಾಗಿರುವುದರಿಂದ ಬ್ಯಾಂಕ್ ಖಾತೆಯ ಓಟಿಪಿ ನೀಡಲು ತಿಳಿಸಿದ್ದಾರೆ.
ಓಟಿಪಿಯನ್ನು ನೀಡಿದ ತಕ್ಷಣದಿಂದಲೇ ಎರಡು ಕಂತಿನಲ್ಲಿ ಖಾತೆಯಲ್ಲಿದ್ದ ಒಟ್ಟು 44 ಸಾವಿರ ರೂ.ಲೂಟಿಯಾಗಿದೆ. ಕಳವಳಗೊಂಡಿರುವ ತೌಸೀಪ್ ಅವರು ಏಜೆನ್ಸಿ ಬದಲು ವಂಚನಾ ಜಾಲದಲ್ಲಿ ಮೋಸ ಹೋಗಿರುವುದು ಬಳಿಕ ಬೆಳಕಿಗೆ ಬಂದಿದೆ.
ಇದೀಗ ತೌಸೀಪ್ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.