ಉಳ್ಳಾಲ ಅ 30: ಗ್ರಾಹಕರು ಠೇವಣಿಯಿಟ್ಟ ಹಣ ಹಾಗೂ ಅಡವಿಟ್ಟ ಚಿನ್ನವನ್ನು ವಾಪಸ್ಸು ಮಾಡದೇ ನಾಟೆಕಲ್ ನಲ್ಲಿರುವ ಪ್ರಜಾಹಿತ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಂಚಿಸುತ್ತಿದೆ ಎಂದು ಆರೋಪಿಸಿ ಗ್ರಾಹಕರು ಸೊಸೈಟಿ ಎದುರುಗಡೆ ಜಮಾಯಿಸಿ ಮುತ್ತಿಗೆ ಹಾಕಿದ ಘಟನೆ ಸೋಮವಾರ ನಡೆದಿದೆ.
ಮದುವೆಯ ಖರ್ಚಿನ ಹಣ, ಬೀಡಿ ಕಟ್ಟಿದ ಹಣ, ನಿವೃತ್ತಿ ಬಳಿಕ ದೊರೆತ ಹಣವನ್ನು ಸುಮಾರು 100 ಕ್ಕೂ ಅಧಿಕ ಗ್ರಾಹಕರು ನಾಟೆಕಲ್ ನ ಪ್ರಜಾಹಿತ ಸೊಸೈಟಿಯಲ್ಲಿ ಠೇವಣಿಯಾಗಿ ಇರಿಸಿದ್ದರೆ, ಇನ್ನು ಹಲವರು ಲಕ್ಷಾಂತರ ಬೆಲೆಬಾಳುವ ಚಿನ್ನ ಅಡವಿರಿಸಿದ್ದರು. 15 ವರ್ಷಗಳ ಹಿಂದೆ ಸ್ಥಾಪನೆಗೊಂಡ ಸೊಸೈಟಿಯ ವ್ಯವಹಾರ ಉತ್ತಮವಾಗಿ ನಡೆಯುತ್ತಿದ್ದು, ಒಂದು ವರ್ಷದಿಂದ ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಹಣವಾಗಲಿ, ಚಿನ್ನವಾಗಲಿ ವಾಪಸ್ಸಾಗಲಿಲ್ಲ. ಸೊಸೈಟಿಗೆ ಹಲವು ಬಾರಿ ಬಂದ ಗ್ರಾಹಕರಿಗೆ ಅವರ ಚಿನ್ನವಾಗಲಿ, ಹಣವಾಗಲಿ ದೊರೆತಿರಲಿಲ್ಲ. ಇದರಿಂದ ಬೇಸತ್ತ ಗ್ರಾಹಕರು ಸೊಸೈಟಿ ನಿರ್ದೇಶಕರನ್ನು ಹಾಗೂ ಪ್ರಬಂಧಕರನ್ನು ತರಾಟೆಗೆ ಪಡೆದುಕೊಂಡಾಗ ಅ.30 ರಂದು ಎಲ್ಲಾ ಗ್ರಾಹಕರ ವಹಿವಾಟನ್ನು ಮರುಪಾವತಿಸುವುದಾಗಿ ಬರವಣಿಗೆಯಲ್ಲಿ ನೀಡಿದ್ದರು. ಆದರೆ ಇಂದು ಸುಮಾರು 70 ಕ್ಕೂ ಅಧಿಕ ಗ್ರಾಹಕರು ಸೊಸೈಟಿಗೆ ಬಂದಾಗ, ಸಿಬ್ಬಂದಿ ಯಾವುದೇ ಪ್ರತಿಕ್ರಿಯಿಸಿದೆ ಭರವಸೆ ನೀಡಿದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರಾಗಲಿ ಕಂಡುಬರಲಿಲ್ಲ. ಇದರಿಂದ ಸೊಸೈಟಿ ಪ್ರಬಂಧಕರು ಹಾಗೂ ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡರು. ಬಳಿಕ ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಪ್ರಬಂಧಕರು ಹಾಗೂ ನಿರ್ದೇಶಕರನ್ನು ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಈ ವೇಳೆ ಕೊಣಾಜೆ ಪೊಲೀಸ್ ಠಾಣೆಯಲ್ಲೂ ಗ್ರಾಹಕರು ಜಮಾಯಿಸಿ ಸೊಸೈಟಿ ಆಡಳಿತ ಮಂಡಳಿ ವಿರುದ್ಧ ದೂರು ನೀಡಲು ಮುಂದಾದರು. ಆದರೆ ಆಡಿಟ್ ನಂತರವೇ ಸೊಸೈಟಿ ಸ್ಥಿತಿಯನ್ನು ಮನಗಂಡು ಗ್ರಾಹಕರ ದೂರಿನಂತೆ ಕ್ರಮಕೈಗೊಳ್ಳುವ ಭರವಸೆಯನ್ನು ಠಾಣಾಧಿಕಾರಿ ಅಶೋಕ್ ವ್ಯಕ್ತಪಡಿಸಿದ್ದಾರೆ.