ಮಂಗಳೂರು ಫೆ23(SB): ಅಕ್ರಮ ಗೋ ಸಾಗಣಿಕೆ ಎಂದು ಅರೋಪಿಸಿ ಇಪ್ಪತ್ತಕ್ಕಿಂತಲೂ ಹೆಚ್ಚಿನ ಗೋವುಗಳಿದ್ದ ವಾಹನವೊಂದನ್ನು ತಡೆಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಸಂಜೆ ಸುಮಾರು ಏಳು ಘಂಟೆಗೆ ಕೈಕಂಬ ಮುಖ್ಯ ರಸ್ತೆಯಲ್ಲಿ ಗೋವುಗಳನ್ನು ಸಾಗಿಸುತ್ತಿದ್ದಾರೆ ಎಂದು ಮಾಹಿತಿ ಪಡೆದ ಭಜರಂಗ ದಳ ಕಾರ್ಯಕರ್ತರು ಲಾರಿಯನ್ನು ಹಿಂಬಾಲಿಸಿ ಗರೋಡಿ ಸಮೀಪ ಲಾರಿಯನ್ನು ನಿಲ್ಲಿಸಿದ್ದರು. ಚಾರಿ ಚಾಲಕ ತನ್ನಲ್ಲಿ ಗೋ ಸಾಗಾಟಕ್ಕೆ ಪರವಾಣಿಗೆ ಇದೆ ಎಂದು ತಿಳಿಸಿದ ಕಾರಣ ಹೆಚ್ಚಿನ ತನಿಖೆಗೆ ಕಾರ್ಯಕರ್ತರು ಲಾರಿಯನ್ನು ಪೋಲಿಸ್ ಠಾಣೆಗೆ ಕೊಂಡೊಯ್ಯುವಂತೆ ಒತ್ತಾಯಿಸಿದರೆನ್ನಲಾಗಿದೆ. ರಾತ್ರಿ ಎಂಟು ಗಂಟೆಗೆ ಕದ್ರಿ ಪೋಲಿಸ್ ಠಾಣೆಗೆ ತಲುಪಿದ ಲಾರಿಯನ್ನು ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಪೋಲಿಸರು ಚಾಲಕ ಗೋ ಸಾಗಟಕ್ಕೆ ಪರವಾನಿಗೆ ಹೊಂದಿದ್ದಾನೆ ಎಂದು ಖಚಿತ ಪಡಿಸಿದ ನಂತರ ಲಾರಿಯನ್ನು ತೆರಳಲು ಅನುಮತಿ ಮಾಡಿಕೊಟ್ಟರು.
ಕದ್ರಿ ಪೋಲಿಸರಿಂದ ತಪಾಸಣೆ ನಡೆದ ನಂತರ ಹೊರಟ ಲಾರಿಗೆ ಭಜರಂಗ ದಳ ಕಾರ್ಯಕರ್ತರು ಕೊಟ್ಟಾರ ಚೌಕಿಯಲ್ಲಿಯಲ್ಲಿಯೂ ತಡೆಯೊಡ್ಡುವ ಪ್ರಯತ್ನ ಮಾಡಿದರು. ತಕ್ಷಣ ಸ್ಥಳಕ್ಕಾಗಮಿಸಿದ ಪೋಲಿಸರು ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾದರು.
ಗೋವುಗಳು ನಗರದ ಪ್ರಮುಖ ಬಿಜೆಪಿ ನಾಯಕರೋರ್ವರ ಒಡೆತನದಲ್ಲಿರುವ ಫಾರ್ಮಿಗೆ ಸೇರಿದ್ದು ಎಂದು ತಿಳಿದು ಬಂದಿದೆ.