ಉಡುಪಿ, ಫೆ 23(SM): ಉಡುಪಿ ಜಿಲ್ಲಾ ನೂತನ ಎಸ್ಪಿಯಾಗಿ ನಿಶಾ ಜೇಮ್ಸ್ ಶನಿವಾರದಂದು ಅಧಿಕಾರ ಸ್ವೀಕರಿಸಿದರು. ಇಂದು ಬೆಳಗ್ಗೆ ನಿರ್ಗಮನ ಎಸ್.ಪಿ. ಲಕ್ಷ್ಮಣ ನಿಂಬರಗಿ ಅವರಿಂದ ನಿಶಾ ಜೇಮ್ಸ್ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಯಲ್ಲಿ ಅಧಿಕಾರ ಸ್ವೀಕರಿಸಿದರು. ಬಳಿಕ ಮಾತನಾಡಿ, ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ಮುಲಾಜಿಲ್ಲದೆ ಮಟ್ಟ ಹಾಕಲಾಗುತ್ತದೆ. ಉತ್ತಮ ಸೇವೆ ನೀಡಲು ಪೊಲೀಸ್ ಇಲಾಖೆಗೆ ಜನತೆ ಸಹಕಾರ ನೀಡಬೇಕು ಎಂದು ಕೋರಿದರು.
ಈ ಹಿಂದೆ ನಿಶಾ ಜೇಮ್ಸ್ ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯಲ್ಲಿ ಎಎಸ್ಪಿ, ಬೆಂಗಳೂರು ಗುಪ್ತಚರ, ರಾಯಚೂರು ಎಸ್ಪಿಯಾಗಿ ಕಾರ್ಯನಿರ್ವಹಿಸಿ ಕೆಎಸ್ಆರ್ಪಿ ಕಮಾಂಡೆಂಟ್ ಹುದ್ದೆಗೆ ವರ್ಗಗೊಂಡಿದ್ದರು. ನಿಶಾ ಜೇಮ್ಸ್ 2013ರ ಐಪಿಎಸ್ ಬ್ಯಾಚ್ನ ಅಧಿಕಾರಿಯಾಗಿದ್ದಾರೆ.
2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ನಿಶಾ 179ನೇ ರ್ಯಾಂಕ್ ಪಡೆದು ಕರ್ನಾಟಕ ಕೇಡರ್ಗೆ ನಿಯುಕ್ತಿಗೊಂಡಿದ್ದರು. ಕೇರಳ ಮೂಲದ ಇವರು ಎಂಎ ಪದವಿ ಪಡೆದಿದ್ದಾರೆ. ತಂದೆ ಖಾಸಗಿ ಸಂಸ್ಥೆ ಉದ್ಯೋಗಿಯಾಗಿದ್ದರು.