ಉಡುಪಿ,ಫೆ 24 (MSP): ಉಡುಪಿಯ 10 ರ ಹರೆಯದ ತನುಶ್ರೀ ಪಿತ್ರೋಡಿ ಯೋಗಾಸನದಲ್ಲಿ ಎರಡು ಜಾಗತಿಕ ದಾಖಲೆ ಮಾಡಿದ್ದು ಶನಿವಾರ ಧನುರಾಸನದಲ್ಲಿ ನಂಬರ್ ಆಫ್ ರೋಲ್ಸ್ನಲ್ಲಿ ವಿಶ್ವದಾಖಲೆ್ ನಿರ್ಮಿಸಿದ್ದಾರೆ.
ನಗರದ ಸೇಂಟ್ ಸಿಸಿಲಿ ಸಮೂಹ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಈ ಬಾಲೆ ಯೋಗಾಸನದ ಧನುರಾಸ ಹಾಕಿ ಒಂದು ನಿಮಿಷದಲ್ಲಿ ಅತಿ ಹೆಚ್ಚು ಬಾರಿ ಅಂದರೆ 62 ಉರುಳು ಹಾಕಿದ್ದು, ಜತೆಗೆ 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ಮೂಲಕ ಎರಡು ವಿಶ್ವದಾಖಲೆ ಮಾಡಿದ್ದಾರೆ. ಈ ಅಪೂರ್ವ ಸಾಧನೆಗಾಗಿ ಅವರಿಗೆ ಸ್ಥಳದಲ್ಲೇ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನ ದಕ್ಷಿಣ ಏಷ್ಯಾ ನಿರ್ದೇಶಕ ಮನೀಶ್ ಬಿಶ್ನೋಯಿ ಪ್ರಮಾಣಪತ್ರ ಹಸ್ತಾಂತರಿಸಿದರು. ಈ ಎರಡು ದಾಖಲೆಗಳು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಗೆ ಸೇರಿವೆ.
೨017ರಲ್ಲಿ ತನುಶ್ರೀ ಈಗಾಗಲೇ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದರು. 2018ರಲ್ಲಿ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ನಿಮಿಷಕ್ಕೆ 41 ಬಾರಿ ತಿರುಗಿಸುವ (ಮೋಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್) ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದರು. ಸತತ 3 ವರ್ಷದಲ್ಲಿ ನಾಲ್ಕು ಸಾಧನೆ ಮಾಡಿದ್ದಾರೆ.2018 ರ ನ.14 ರಂದು ಇಟಲಿಯ ರೋಮ್ ನಗರದಲ್ಲಿ ನಡೆದ ವಿಶ್ವ ಗಿನ್ನೆಸ್ ದಾಖಲೆಯ ಸಾಧಕರೊಂದಿಗೆ ಸೇರಿ ಯೋಗ ಪ್ರದರ್ಶನ ನೀಡಿದ್ದ ತನುಶ್ರೀ ಪಿತ್ರೋಡಿ ಸಂತ ಸಿಸಿಲಿ ಕನ್ನಡ ಮಾಧ್ಯಮ ಶಾಲೆಯ 5 ನೇ ತರಗತಿ . ಇದಲ್ಲದೆ ಭರತನಾಟ್ಯ ಮತ್ತು ಯಕ್ಷಗಾನದಲ್ಲೂ ಸೈ ಎನಿಸಿಕೊಂಡಿದ್ದಾಳೆ.
ತಾಯಿ ಸಂಧ್ಯಾ ಮಾತನಾಡಿ, ಮಗಳ ಸಾಧನೆ ನಮಗೆ ಖುಷಿ ತಂದಿದೆ. ಅವಳು ಯೂಟ್ಯೂಬ್ ವೀಡಿಯೊ ನೋಡಿ ಅಭ್ಯಾಸ ಮಾಡುತ್ತಿದ್ದಳು. 52 ಗರಿಷ್ಠ ಉರುಳು ಹಾಕುತ್ತಿದ್ದವಳು ಈಗ 62 ಮುಟ್ಟಿರುವುದು ಸಂತಸ ನೀಡಿದೆ. ಈ ಸಾಧನೆ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಣೆ ಎಂದರು.