ಮಂಗಳೂರು,ಫೆ 25(MSP): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಯಕ ಸತ್ಯಜಿತ್ ಸುರತ್ಕಲ್ ಅವರಿಗೆ ಟಿಕೆಟ್ ನೀಡುವಂತೆ ಅವರ ಬೆಂಬಲಿಗರು ವಿನೂತನ ತಂತ್ರ ಹೂಡಿ ಟಿಕೆಟ್ ಗಾಗಿ ಈಗಿಂದಲೇ ಒತ್ತಡ ಹೇರುತ್ತಿದ್ದಾರೆ.
ಒಂದೆಡೆ ನಗರದಲ್ಲಿ ಸತ್ಯಜಿತ್ ಪರ ಅಲ್ಲಲ್ಲಿ ಬ್ಯಾನರ್ ಗಳು ರರಾಜಿಸುತ್ತಿದ್ದರೆ, ಇನ್ನೊಂದೆಡೆ ಫೆ.25 ರ ಸೋಮವಾರ 10 ಗಂಟೆಗೆ ಸತ್ಯಜಿತ್ ಅವರ ಬೆಂಬಲಿಗರು, ಏಕಕಾಲಕ್ಕೆ ಸತ್ಯಜಿತ್ ಸುರತ್ಕಲ್'ಗೆ ಟಿಕೆಟ್ ನೀಡುವಂತೆ ಟ್ವೀಟ್ ಅಭಿಯಾನ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮತ್ತು ಇತರ ಬಿಜೆಪಿ ಮುಖಂಡರಿಗೆ ಟ್ವೀಟ್ ಮೂಲಕ ಸತ್ಯಜಿತ್ ಅವರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರಲಿದ್ದಾರೆ.
ಉತ್ತಮ ಸಂಸದರನ್ನು ಪಡೆಯುವುದು ನಮ್ಮ ಹಕ್ಕು, ’ನಾವೆಲ್ಲರೂ ಸತ್ಯಜಿತ್ ಸುರತ್ಕಲ್ ಪರ ನಿಲ್ಲೋಣ ’ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಬಿಜೆಪಿ ನಾಯಕರ ಅಧಿಕೃತ ಟ್ವಿಟ್ಟರ್ ಖಾತೆಗಳಿಗೆ ಈ ಟ್ವೀಟ್ ಗಳನ್ನು ಟ್ಯಾಗ್ ಮಾಡುವಂತೆ ಅವರ ಬೆಂಬಲಿಗರು ವಿನಂತಿಸಿಕೊಂಡಿದ್ದಾರೆ.