ಪುತ್ತೂರು,ಫೆ 25(MSP): ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಮಟ್ಟರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಚಾಲನೆ ನೀಡುವ ಸಂದರ್ಭ ರಾಜ್ಯದ ರೈತರೊಡನೆ ಸಂವಾದ ನಡೆಸಿದ್ದಾರೆ.ಲೈವ್ ವೆಬ್ ಕಾಸ್ಟಿಂಗ್ ಮೂಲಕ ಸಂವಾದ ನಡೆಸಿದ ಮೋದಿ ಕರ್ನಾಟಕದ ಇಬ್ಬರು ರೈತರೊಂದಿಗೆ ಮಾತುಕತೆ ನಡೆಸಿದರು. ಇದರಲ್ಲಿ ತುಮಕೂರಿನ ರೈತ ಹಾಗೂ ಪುತ್ತೂರಿನ ಪ್ರಗತಿಪರ ಕೃಷಿಕ ಸೇಡಿಯಾಪು ಜನಾರ್ದನ ಭಟ್ ಅವರು ಮೋದಿ ಅವರೊಂದಿಗೆ ಸಂವಾದ ನಡೆಸುವ ಅಪೂರ್ವ ಅವಕಾಶ ಪಡೆದುಕೊಂಡರು.
ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರ ದೇಶಾದ್ಯಂತ ನಡೆಯಿತು. ಇದರ ಜತೆಗೆ ಪ್ರಧಾನಿ ಅವರೊಂದಿಗೆ ಸಂವಾದವನ್ನೂ ಏರ್ಪಡಿಸಿತ್ತು. ಇದಕ್ಕಾಗಿ ಪುತ್ತೂರಿನ ಮೊಟ್ಟೆತ್ತಡ್ಕ ಗೇರು ಸಂಶೋಧನಾ ಕೇಂದ್ರದಲ್ಲಿ ಲೈವ್ ವೆಬ್ ಕಾಸ್ಟಿಂಗ್ ಆಯೋಜಿತವಾಗಿತ್ತು. ಈ ಸಂದರ್ಭ ಪುತ್ತೂರಿನ ಸೇಡಿಯಾಪು ಜನಾರ್ದನ್ ಭಟ್ ಪ್ರಧಾನಿಯೊಂದಿಗೆ ನೇರ ಮಾತುಕತೆ ನಡೆಸಿದ್ದಾರೆ.
"ನಾನೊಬ್ಬ ಗೇರುಬೀಜ, ಬಾಳೆ, ಕರಿಮೆಣಸು, ಅಡಿಕೆ ಬೆಳೆಯುವ ಸಣ್ಣ ರೈತ. ನಮ್ಮ ಸುತ್ತಲಿನವರು ಕೂಡಾ ಇದೇ ಬೆಳೆ ಬೆಳೆಯುವ ಸಣ್ಣ ರೈತರಾಗಿದ್ದಾರೆ. ಪ್ರಧಾನ ಮಂತ್ರಿಗಳೇ ನೀವು ರೈತರಿಗೆ ಅನುಕೂಲವಾಗುವ ಅನೇಕ ಯೋಜನೆಯನ್ನು ಜಾರಿಗೆ ತಂದಿದ್ದೀರಿ. ಅದರಲ್ಲಿಯೂ ನೀಮ್ ಕೋಟಿಂಗ್ ಇರುವ ಯೂರಿಯಾ ರಸಗೊಬ್ಬರ, ಫಸಲ್ ಭೀಮಾ ಯೋಜನೆಗಳು ನಮಗೆ ಉಪಯುಕ್ತ.ಈಗ ಜಾರಿಗೆ ತಂದ ಕಿಸಾನ್ ಸಮ್ಮಾನ್ ಯೋಜನೆ ಸಹ ಸಣ್ಣ ರೈತರಿಗೆ ಲಾಭ ತರಲಿದೆ." ಅವರು ಪ್ರಧಾನಿಗಳಿಗೆ ಕನ್ನಡದಲ್ಲಿ ಹೇಳಿದ್ದಾರೆ.
ರೈತ ಜನಾರ್ಧನ ಭಟ್ ಅವರು ಕನ್ನಡದಲ್ಲಿ ಹೇಳಿದ ಮಾತುಗಳನ್ನು ಹಿಂದಿ ಭಾಷಾಂತರಕಾರರು ಪ್ರಧಾನಿಗೆ ಅರ್ಥೈಸಿದರು. ಆ ನಂತರ ಪ್ರಧಾನಿ ಮೋದಿ ಅವರು ಜನಾರ್ಧನ ಭಟ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಬ್ ಗೌತಮ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ಕೇಂದ್ರದ ನಿರ್ದೇಶಕ ಡಾ. ಎಂ. ಗಂಗಾಧರ ನಾಯಕ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಕ್ಯಾಂಪ್ಕೋ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಧಾನಿ ಜತೆ ಸಂವಾದದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ರೈತ ಜನಾರ್ಧನ ಭಟ್ "ನಾನು ಕನ್ನಡದಲ್ಲೇ ಮಾತನಾಡಿದೆ. ಹಿಂದಿ ಭಾಷಾಂತರಕಾರರು ನನ್ನ ಮಾತನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿಸಿದ್ದಾರೆ. ಕರಾವಳಿ ಭಾಗದ ಎಲ್ಲಾ ರೈತರ ಪರವಾಗಿ ಪ್ರಧಾನಿ ಜತೆ ಮಾತನಾಡಲು ಮತ್ತು ಧನ್ಯವಾದ ಹೇಳಲು ನನಗೆ ಅವಕಾಶ ದೊರಕಿದ್ದು ಸಂತಸ ತಂದಿದೆ.ಇದೊಂದು ಅವಿಸ್ಮರಣೀಯ ಕ್ಷಣ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.