ಕುಂದಾಪುರ,ಫೆ 26(MSP):ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಆಗಿರುವ ಬದಲಾವಣೆಯನ್ನು ಪ್ರತಿಯೊಬ್ಬ ಜನರು ಕೂಡಾ ಕಂಡಿದ್ದಾರೆ. ಮೋದಿಯವರ ಪರವಾಗಿ ನಾವು ನಿಂತರೆ, ಮೋದಿ ನಮ್ಮ ಪರವಾಗಿ ನಿಲ್ಲುತ್ತಾರೆ. ಜನಸಮಾನ್ಯರ ಪ್ರಧಾನಿ ಎಂದರೆ ಅದು ಮೋದಿಯವರು. ಕುಂಭಮೇಳದಂತಹ ಕಾರ್ಯಕ್ರಮದಲ್ಲಿ ಅವರು ಪೌರಕಾರ್ಮಿಕರ ಪಾದ ತೊಳೆಯುವ ಮೂಲಕ ಎತ್ತರಕ್ಕೆರಿದ್ದಾರೆ. ಆದರೆ ಇದನ್ನೆ ಪ್ರಚಾರ ಎಂದು ಹೇಳುತ್ತಿರುವ ಕಾಂಗ್ರೆಸ್ನ ರಾಹುಲ್ ಗಾಂಧಿ ಸಂಬಂಧಿಕರು ಭಾರತದ ಹಿರಿಯರ ಪಾದಕ್ಕೇರಗಿದ್ದಾರಾ? ಎಂದು ಚಕ್ರವರ್ತಿ ಸೂಲಿಬೆಲೆ ಪ್ರಶ್ನಿಸಿದ್ದಾರೆ.
ಅವರು ಕುಂದಾಪುರದಲ್ಲಿ ಟೀಮ್ ಮೋದಿ ಕುಂದಾಪುರ ಆಯೋಜಿಸಿದ ’ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು’ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ದೇಶದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು, ಜಾಗತಿಕ ಮಟ್ಟದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ನಿರೂಪಿಸಲು ಮೋದಿಯಂಥಹ ದೇಶ ಭಕ್ತರು ಬೇಕು. ಈ ದೇಶದ ಜನತೆ ಮತ್ತೆ ಮೋದಿಯವರನ್ನು ಬೆಂಬಲಿಸಲಿದ್ದಾರೆ. ಮೋದಿಜಿಯವರ ಆಡಳಿತ ವ್ಯವಸ್ಥೆಯಲ್ಲಿ ಭಾರತ ಸಾಧಿಸಿರುವ ಮಹತ್ವದ ಮೈಲಿಗಲ್ಲು ಜನರ ಮುಂದಿದೆ ಎಂದು ಅವರು ಹೇಳಿದರು.
ಪ್ರಧಾನಿಯಾಗುತ್ತಿದ್ದಂತೆ ಮೋದಿಜಿಯವರು ಸೈನಿಕರ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಸೈನಿಕರಿಗೂ ಕೂಡಾ ಇಂಥಹ ಪ್ರಧಾನಿಯೊಬ್ಬರ ಅವಶ್ಯಕತೆ ಇತ್ತು. ಅದನ್ನು ಭಾರತೀಯ ಸೈನಿಕರೇ ಹೇಳಿ ಕೊಂಡಿದ್ದಾರೆ. ಪ್ರತಿಯೊಂದು ದೇಶದಲ್ಲಿಯೂ ಇರುವ ಯುದ್ಧ ಸ್ಮಾರಕಗಳ ಬಗ್ಗೆ ಕನಸು ಕಂಡ ಮೋದಿಯವರು ವಾರ್ ಮೆಮೋರಿಯಲ್ ನಿರ್ಮಾಣ ಮಾಡಿ ಇಂದು ದೇಶಕ್ಕೆ ಸಮರ್ಪಿಸಿದ್ದಾರೆ. ಇಲ್ಲಿ ಹುತಾತ್ಮರಾದ 20 ಸಾವಿರ ಸೈನಿಕರ ಹೆಸರಿನಲ್ಲಿ ಪ್ರತ್ಯೇಕ ಕಲ್ಲುಗಳ ಸ್ಥಾಪನೆ ಮಾಡಲಾಗಿದೆ. ಕಳೆದ 70 ವರ್ಷದಲ್ಲಿ ಆಗಿರುವ ಕಾರ್ಯ ಇವತ್ತು ಮೋದಿಯವರಿಂದ ಆಗಿದೆ ಎನ್ನುವುದು ನಾವು ಸಂತೋಷ ಪಡಬೇಕಾಗಿದೆ.
ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ ಬೇಡುವ ಹಂತಕ್ಕೆ ಬಂದು ನಿಂತಿದೆ. ಹೀಗೆ ಆದರೆ ಮುಂದೆ ಭಿಕ್ಷೆ ಪಾತ್ರೆಯನ್ನೂ ಅದು ಕಳೆದುಕೊಳ್ಳಲಿದೆ. ಪಾಕಿಸ್ತಾನದ ಮೇಲೆ ಆಂತರಿಕ ಹೊಡೆತ ನೀಡಲಾಗುತ್ತಿದೆ. ಆಂತರಿಕವಾಗಿ ಪಾಕಿಸ್ತಾನದ ಹಣಕಾಸು ವ್ಯವಸ್ಥೆಯನ್ನು ಹಿಂಡುವ ಕಾರ್ಯ ಆಗುತ್ತಿದೆ. ಪಾಕಿಸ್ತಾನದ ಎಲ್ಲ ಕುಕೃತ್ಯಗಳಿಗೆ ತಕ್ಕ ಉತ್ತರ ನೀಡುವ ಕೆಲಸ ಆಗುತ್ತಿದೆ ಎಂದರು.
ನರೇಂದ್ರ ಮೋದಿಯವರು ಪಕ್ಕ ವ್ಯವಹಾರ ಕುಟುಂಬದಿಂದ ಬಂದವರಿಗೆ. ದೇಶದ ವಿಷಯದಲ್ಲಿ ಅವರು ಇಡುವ ಪ್ರತಿಯೊಂದು ಹೆಜ್ಜೆಗಳು ಕೂಡಾ ಮಹತ್ವದ್ದಾಗಿದೆ. ರೆಫಲ್ ವ್ಯವಹಾರದಲ್ಲಿ ಕೂಡಾ ಮೋದಿಜಿ ತೀರ್ಮಾನ ಉತ್ತಮವಾಗಿದೆ. ವಿಜಯ ಮಲ್ಯನ ಪರವಾಗಿ ನಿಂತಿರುವುದು ಯಾರು ಎನ್ನುವುದು ಜನರಿಗೆ ಗೊತ್ತಿದೆ. ಆವತ್ತು ಸಾವಿರಾರು ಕೋಟಿ ರೂಪಾಯಿಗಳನ್ನು ಕಾಂಗ್ರೆಸ್ ಮುಖಂಡರು ವಿಜಯ ಮಲ್ಯಗೆ ನೀಡಿದ್ದರು ಎನ್ನುವುದು ಜನರು ತಿಳಿದುಕೊಳ್ಳಬೇಕು. ಇವತ್ತು ವಿಜಯ ಮಲ್ಯ ದೇಶಕ್ಕೆ ವಂಚನೆ ಮಾಡಿದ್ದರ ಹಿಂದೆ ಕಾಂಗ್ರೆಸ್ನದ್ದು ಪಾತ್ರವಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಯೋಧ ರಾಮಣ್ಣ ಶೆಟ್ಟಿ ಹೊಸಮಠ ಅವರನ್ನು ಸನ್ಮಾನಿಸಲಾಯಿತು. ಶಂಕರ ಅಂಕದಕಟ್ಟೆ ಕಾರ್ಯಕ್ರಮ ನಿರ್ವಹಿಸಿ, ವಿನೋದ್ ಕುಮಾರ್ ಸ್ವಾಗತಿಸಿದರು. ಸುನೀಲ್ ಹೇರಿಕುದ್ರು ವಂದಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಸಾವಿರಾರು ಜನ ಆಸನದ ಕೊರತೆಯಿಂದ ನಿಂತು ಕೊಂಡೇ ಕಾರ್ಯಕ್ರಮ ವೀಕ್ಷಿಸಿದರು.