ಮಂಗಳೂರು ಅ 31: ನಗರ ಪಾಲಿಕೆಯ ಆಡಳಿತ ವೈಫಲ್ಯದ ವಿರುದ್ದ ಇಂದು ಜಿಲ್ಲಾ ಬಿಜೆಪಿ ಘಟಕ ನಗರ ಪಾಲಿಕೆಯ ಮುಂದೆ ಅ. ೩೧ರ ಮಂಗಳವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಉತ್ತರ ವಲಯದ ಅಧ್ಯಕ್ಷ ವೇದವ್ಯಾಸ್ ಕಾಮತ್ , ನಗರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡಲು ಪಾಲಿಕೆ ಸಂಪೂರ್ಣವಾಗಿ ವಿಫಲವಾಗಿದೆ. ಇದೆಲ್ಲದರ ನಡುವೆ ಮೇಯರ್ ಕವಿತಾ ಸನಿಲ್ ಅವರ ನಿವಾಸದ ಬಳಿ ಕೆಲಸ ಮಾಡುತ್ತಿದ್ದ ವಾಚ್ ಮೆನ್ ಪತ್ನಿಯನ್ನು ಥಳಿಸಿ ಮಂಗಳೂರಿನ ಜನತೆ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ್ದಾರೆ. ನೊಂದ ಮಹಿಳೆ ಪೊಲೀಸರಿಗೆ ದೂರು ದಾಖಲಿಸಿದರೆ ಮೇಯರ್ ಅಲ್ಲೂ ಸೇಡಿಗಾಗಿ ಪ್ರತಿದೂರು ದಾಖಲಿಸಿದ್ದಾರೆ ಎಂದರು. ಹೀಗಾಗಿ ಮೇಯರ್ ಕವಿತಾ ಸನಿಲ್ ತನ್ನ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿಯ ಪಾಲಿಕೆ ಸದಸ್ಯ ಸುಧೀರ್ ಶೆಟ್ಟಿ ಮೇಯರ್ ಕವಿತಾ ಸನಿಲ್ ಅವರದ್ದು ಗೂಂಡಾ ಪ್ರವೃತ್ತಿ. ಬಡಜನರಿಗಾಗಿ ನನ್ನ ಸೇವೆ ಎನ್ನುತ್ತಿದ್ದ ಮೇಯರ್ ಇಂದು ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ 100 ಹೆಚ್ಚು ಅನಧಿಕೃತ ಮಸಾಜ್ ಪಾರ್ಲರ್ ಗಳು ಕಾರ್ಯನಿರ್ವಹಿಸುತ್ತಿರುವಾಗ ಕೇವಲ ಒಂದೋ ಎರಡೋ ಮಸಾಜ್ ಪಾರ್ಲರಿಗೆ ದಾಳಿ ಮಾಡಿ ಪ್ರಚಾರ ಪಡೆಯುತ್ತಿದ್ದಾರೆ. 2000 ಕ್ಕೂ ಹೆಚ್ಚು ಅನಧಿಕೃತ ಕುಡಿಯುವ ನೀರಿನ ಸಂಪರ್ಕವಿದೆ, ಆದರೆ ದಾಳಿ ಮಾಡಿದ್ದು ಕೇವಲ ಒಂದು ವಸತಿ ಸಮುಚ್ಚಯಕ್ಕೆ. ಇದೆಲ್ಲದರ ಜತೆಗೆ ಪಾಲಿಕೆಯೂ ಮುಖ್ಯಮಂತ್ರಿ ನಿಧಿಯನ್ನು ಸಮರ್ಥವಾಗಿ ಅಭಿವೃದ್ದಿ ಕಾರ್ಯಗಳಿಗೆ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಮಖಂಡ ರವಿ ಶಂಕರ್ ಮಿಜಾರ್, ನಗರದಲ್ಲಿ ಹಲವು ಅಭಿವೃದ್ದಿ ಕೆಲಸಗಳಿಗೆ ಇನ್ನೂ ಕೂಡಾ ಚಾಲನೆ ಸಿಕ್ಕಿಲ್ಲ. ರಸ್ತೆ , ಒಳಚರಂಡಿ ಸಮಸ್ಯೆ ನಗರದಲ್ಲಿ ತಾಂಡವವಾಡುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ಭರತ್ ಶೆಟ್ಟಿ, ಪೂಜಾ ಪೈ , ರೂಪಾ ಡಿ ಬಂಗೇರಾ ಮುಂತಾದವರು ಉಪಸ್ಥಿತರಿದ್ದರು.