ಬೆಳ್ಮಣ್, ಫೆ 27(SM): ಕಾರ್ಕಳ ತಾಲೂಕಿನ ಪುರಸಭೆ ಸೇರಿದಂತೆ 34 ಗ್ರಾಪಂ ವ್ಯಾಪ್ತಿಯ ಸುಮಾರು 10 ಸಾವಿರಕ್ಕೂ ಮಿಕ್ಕಿದ ಮನೆಗಳಿಗೆ ತೆರವು ಭೀತಿ ಉಂಟಾಗಿದೆ. 94ಸಿ ಹಾಗೂ 94 ಸಿಸಿಯಡಿಯಲ್ಲಿ ಅರ್ಜಿ ಸಲ್ಲಿಸಿ ಮನೆ ಕಟ್ಟಿಕೊಂಡ ಫಲಾನುಭವಿಗಳು ಇದೀಗ ನೆಲೆ ಕಳೆದುಕೊಳ್ಳುವ ಆತಂಕದಲ್ಲಿದ್ದು, ಬೆಳ್ಮಣ್ ಗ್ರಾಮ ಪಂಚಾಯತ್ನಲ್ಲಿ ಬುಧವಾರ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಜಂತ್ರ ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಶೆಡ್ ರಚಿಸಿ ಮನೆ ಕಟ್ಟಿ ಕುಳಿತುಕೊಂಡ ಸುಮಾರು ೫ ಕುಟುಂಬಗಳನ್ನು ಪಂಚಾಯತ್ ಪಿಡಿಒ ಪ್ರಕಾಶ್ ರವರ ನೇತೃತ್ವದ ತಂಡ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರ ಬಂದೋಬಸ್ತ್ನಲ್ಲಿ ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ಕಾರ್ಕಳ ತಹಶೀಲ್ದಾರರ ಆದೇಶವೇ ಕಾರಣ ಎಂದು ತಿಳಿದು ಬಂದಿದ್ದು ಯಾರೋ ಹೇಳಿದ ಮಾತಿಗೆ ಮರುಳಾಗಿ ಸರಕಾರಿ ಜಮೀನಿನಲ್ಲಿ ಶೆಡ್ ಹಾಕಿ ಕುಳಿತು ಸ್ವಂತ ಜಮೀನಿನ ಕನಸು ಕಟ್ಟಿ ಕೊಂಡಿದ್ದ ೫ ಕುಟುಂಬಗಳು ಬೀದಿಪಾಲಾಗಿವೆ.
ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿ ಕುಳಿತ್ತಿದ್ದ ಬಗ್ಗೆ ಜಂತ್ರ ಪರಿಸರದ ಸಾರ್ವಜನಿಕರ ದೂರೇ ಇಂದಿನ ಈ ತೆರವು ಕಾರ್ಯಾಚರಣೆಗೆ ಕಾರಣ ಎಂದು ತಿಳಿದು ಬಂದಿದೆ. ಬೆಳ್ಮಣ್ ಪಂಚಾಯತ್ ಆಡಳಿತ ಈ ನಿರ್ಣಯ ಕೈಗೊಂಡಿದ್ದು ಇದು ಇಡೀ ತಾಲೂಕಿನಲ್ಲಿ ಅನಧಿಕೃತ ಮನೆಗಳನ್ನು ಕೆಡಹುವ ಬಗ್ಗೆ ಸೂಚನೆ ಎನ್ನಲಾಗಿದೆ. ಅಲ್ಲದೆ ವೋಟಿಗಾಗಿ ಮಾತು ಕೇಳಿ ಅಕ್ರಮವಾಗಿ ಮನೆ ಕಟ್ಟಿ ಕುಳಿತ ಅಮಾಯಕರು ಇದೀಗ ದಿಕ್ಕು ಕಾಣದೆ ಕಂಗಾಲಾಗಿದ್ದಾರೆ.
ಜಂತ್ರದಲ್ಲಿ ಅಕ್ರಮವಾಗಿ ಮನೆ ಕಟ್ಟಿ ಕುಳಿತ್ತಿದ್ದ ಸುಮಾರು ಐದು ಮನೆಗಳಿಗೂ ಗ್ರಾಮ ಪಂಚಾಯತ್ ಆಡಳಿತ ನಿರ್ಣಯದಂತೆ ಮೂರು ಬಾರಿ ನೋಟಿಸನ್ನು ನೀಡಲಾಗಿದ್ದರೂ ಮನೆಯ ತೆರವು ಕಾರ್ಯ ನಡೆಯದ ಹಿನ್ನಲೆಯಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ನೇತೃತ್ವದಲ್ಲಿ ಅನಧಿಕೃತ ಮನೆಗಳ ತೆರವು ಕಾರ್ಯ ನಡೆದಿದೆ.