ಬೆಂಗಳೂರು,ಫೆ 28(MSP):ನಾಳೆಯಿಂದ ಪ್ರಾರಂಭವಾಗಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆ ಆಗದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದ್ದು, ಸಿ.ಸಿ ಟಿ.ವಿ ಕಣ್ಗಾವಲು, ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆ ಪ್ರಾರಂಭವಾಗಲಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಕ್ತ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಆತಂಕ ಬೇಡ. ಮೂರು ವರ್ಷಗಳ ಹಿಂದೆ ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಗೃಹಇಲಾಖೆ ಕೆಲವು ಸಲಹೆಗಳನ್ನು ನೀಡಿದೆ.ಆ ಪ್ರಕಾರ, ಕರ್ನಾಟಕ ಸೆಕ್ಯುರ್ ಎಕ್ಸಾಮಿನೇಷನ್ ಸಿಸ್ಟಮ್ ಜಾರಿಗೊಳಿಸಲಾಗಿದೆ. ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರ ಮೇಲೆ ವಿಶೇಷ ಕಣ್ಗಾವಲು ಇಡಲಾಗಿದೆ. ಪರೀಕ್ಷಾ ಅಕ್ರಮಗಳನ್ನು ನಡೆಸಿದರೆ, ‘ಕೋಕಾ’ ಕಾಯ್ದೆಯಡಿ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪರೀಕ್ಷಾ ಅಕ್ರಮಗಳನ್ನು ತಡೆಯಲು 2026 ವಿಶೇಷ ಮೇಲ್ವಿಚಾರಕರ ತಂಡಗಳನ್ನು ರಚಿಸಲಾಗಿದೆ ಎಂದರು.
ಇದಲ್ಲದೆ ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳು ವಾಟ್ಸ್ ಆಪ್ ಮೂಲಕ ಪ್ರಶ್ನೆಪತ್ರಿಕೆ ಪಡೆದರೂ ಅಪರಾಧ. ಮೊಬೈಲ್ ಇ- ಮೇಲ್ ಮೂಲಕ ಪ್ರಶ್ನೆಪತ್ರಿಕೆ ಪಡೆದಿರುವುದು ಸಾಬೀತಾದಲ್ಲಿ ಅಂತಹ ವಿದ್ಯಾರ್ಥಿಗಳು ಕೂಡಾ ಬಂಧನಕ್ಕೊಳಗಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವರ್ಷ 6,73,606 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ, 12,000 ವಿದ್ಯಾರ್ಥಿಗಳು ಕಡಿಮೆ ಆಗಿದ್ದಾರೆ. ಪರೀಕ್ಷೆಗೆ ಹಾಜರಾಗುವ ಬಾಲಕಿಯರ ಸಂಖ್ಯೆ ಕಳೆದ ಬಾರಿಗಿಂತ ಈ ವರ್ಷ ಹೆಚ್ಚಾಗಿದೆ ಎಂದು ಉಮಾಶಂಕರ್ ತಿಳಿಸಿದರು.
ಇನ್ನೊಂದೆಡೆ ಕರಾರಸಾ ನಿಗಮವು ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ಮಾ.೧ ರಿಂದ ೧೮ ರವರೆಗೆ ಪರೀಕ್ಷೆಗೆ ಹಾಜರಾಗುವ ಎಲ್ಲಾ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಮತ್ತು ಪರೀಕ್ಷಾ ಕೇಂದ್ರದಿಂದ ವಾಸಸ್ಥಳದವರೆಗೆ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ನಗರ ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.