ಮಂಗಳೂರು ಅ 31: ಪಾಲಿಕೆಯ ಸಾಮಾನ್ಯ ಸಭೆ ಇವತ್ತು ಅಕ್ಷರಶಃ ರಣಾಂಗಣವಾಗಿತ್ತು . ಅ,೨೧ ರ ಮಂಗಳವಾರ ನಡೆದ ಸಭೆಯ ಆರಂಭವಾಗುತ್ತಿದ್ದಂತೆ ಅಪಾರ್ಟ್ಮೆಂಟ್ ಕಾವಲುಗಾರನ ಪತ್ನಿಯ ಮೇಲೆ ಹಲ್ಲೆ ನಡೆಸಿದ ವಿಷಯವನ್ನೇ ತನ್ನ ಪ್ರಮುಖ ಅಸ್ತ್ರವನ್ನಾಗಿಸಿದ ಬಿಜೆಪಿ ಸದಸ್ಯರು ಮೇಯರ್ ಕವಿತಾ ಸನಿಲ್ ಅವರ ರಾಜೀನಾಮೆಗೆ ಆಗ್ರಹಿಸಿದರು. ಇದರಿಂದ ಕುಪಿತರಾದ ಕಾಂಗ್ರೇಸ್ ಸದಸ್ಯರು ಪ್ರತ್ಯಾರೋಪ ಮಾಡಿದರು. ಆರೋಪ- ಪ್ರತ್ಯಾರೋಪಗಳ ನಡುವೆ ಬಿಜೆಪಿ ಸದಸ್ಯರು ಮಂಗಳವಾರ ಪಾಲಿಕೆಯ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದಾಗ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.ಕಾಂಗ್ರೇಸ್ - ಬಿಜೆಪಿ ಸದಸ್ಯರ ಮಾತಿನ ಚಕಮಕಿಯ ನಡುವೆ ತಳ್ಳಾಟ, ನೂಕಾಟ ನಡೆದಿದೆ. ಈ ವೇಳೆ ಕಾಂಗ್ರೆಸ್ ಸದಸ್ಯ ವಿನಯ್ ರಾಜ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಎಲ್ಲಾ ಆರೋಪಗಳಿಂದ ನೊಂದ ಕವಿತಾ ಸನಿಲ್, ಅಪಾರ್ಟ್ಮೆಂಟ್ ಕಾವಲುಗಾರನ ಪತ್ನಿಯ ಮೇಲೆ ಹಲ್ಲೆ ನಾನು ಮಾಡಿಲ್ಲ. ನೀವು ನನ್ನನ್ನು ಈ ವಿಚಾರದಲ್ಲಿ ಒಬ್ಬ ತಾಯಿಯಾಗಿ ನೋಡಿ, ಮೇಯರ್ ಆಗಿ ನೋಡಬೇಡಿ ಎಂದು ಕಣ್ಣೀರು ಹಾಕಿದರೆಂದು ತಿಳಿದು ಬಂದಿದೆ. ಆರೋಪ ಮಾಡುತ್ತಿರುವ ನಿಮಗೆ ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು.