ಮಂಗಳೂರು,ಫೆ 28(MSP): ತೊಕ್ಕೊಟ್ಟು ಮತ್ತು ಪಂಪ್ ವೆಲ್ ಮೇಲ್ಸೆತುವೆಯೂ ಕ್ರಮವಾಗಿ ಏಪ್ರಿಲ್ 10 ಮತ್ತು ಮೇ 31 ರಂದು ಲೋಕಾರ್ಪಣೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಫೆ 28 ರಂದು ನಗರದ ಹೋಟೇಲ್ ತಾಜ್ ಗೇಟ್ ವೇ ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷತೆಯಲ್ಲಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾರ್ಯದರ್ಶಿ ವೈಭವ ದಾಂಘೇ ಹಾಗೂ ಸಂಸದ ನಳಿನ್, ಶಾಸಕರಾದ ವೇದವ್ಯಾಸ್ ಕಾಮತ್ , ಡಾ.ಭರತ್ ವೈ ಶೆಟ್ಟಿ , ರಾಜೇಶ್ ಉಳಿಪಾಡಿಗುತ್ತು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಸಂಸದ ನಳಿನ್ ಈ ವಿಚಾರ ವಿವರಿಸಿದರು.
ಜಿಲ್ಲೆಯಲ್ಲಿ ನವಯುಗ ಕಂಪನಿಯು 2012 ರಲ್ಲಿ ಕಾಮಗಾರಿ ಆರಂಬಿಸಿತ್ತು.ತಲಪಾಡಿಯಿಂದ ಕುಂದಾಪುರದ ಕಾಮಗಾರಿಗಳನ್ನು ’ ಬಿಓಟಿ’ (ಬಿಲ್ಡ್ ಆಪರೇಟ್ ಟ್ರನ್ಸ್ ಪರ್) ಆಧಾರದಲ್ಲಿ ನವಯುಗ ಸಂಸ್ಥೆಗೆ ನೀಡಲಾಗಿತ್ತು. ಈ ಒಪ್ಪಂದದ ಪ್ರಕಾರ ನವಯುಗ ಸಂಸ್ಥೆಯೇ ಕಾಮಗಾರಿಗೆ ಹಣ ಹಾಕಿ , ಕಾಮಗಾರಿ ಮುಗಿಸಿ, 35 ವರ್ಷಗಳ ಕಾಲ ಟೋಲ್ ಗೇಟ್ ಹಣ ಸಂಗ್ರಹಿಸಿ ಬಳಿಕ ಸರ್ಕಾರಕ್ಕೆ ಬಿಟ್ಟುಕೊಡಬೇಕು ಎನ್ನುವುದು ಒಡಂಬಡಿಕೆಯ ಸಾರ. ಈ ಒಪ್ಪಂದದಂತೆ ನವಯುಗ ಕಂಪನಿ ಆರಂಭದಲ್ಲಿ ಕಾಮಗಾರಿ ವೇಗವಾಗಿ ಮಾಡಿ ಮುಗಿಸಿದೆ. ಇದಕ್ಕೆ ಉಳ್ಳಾಲ ಹಾಗೂ ಪಾವಂಜೆ ಸೇತುವೆ ಉತ್ತಮ ಉದಾಹರಣೆ. ಪಂಪ ವೆಲ್ ಮೇಲ್ಸೆತುವೆ ಕಾಮಗಾರಿ ಪ್ರಾರಂಭಿಸುವ ಮುಂಚೆ, ಮಹಾನಗರ ಪಾಲಿಕೆ ಒಡಂಬಡಿಕೆ ಮಾಡಿಕೊಂಡು ಪಂಪ್ ವೆಲ್ ನಲ್ಲಿದ್ದ ಮಹಾವೀರ ಸರ್ಕಲ್ ಅನ್ನು ನವಯುಗ ಕಂಪನಿಗೆ ಬಿಟ್ಟು ಕೊಡಬೇಕಿತ್ತು. ಆ ಬಳಿಕ ಅದರ ಸ್ಥಳಾಂತರ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯಿತು. ಅಷ್ಟರೊಳಗೆ ನವಯುಗ ಸಂಸ್ಥೆ ಆರ್ಥಿಕ ನಷ್ಟ ಅನುಭವಿಸಿ ಮುಳುಗಿಬಿಟ್ಟಿತು.
ಇದೀಗ ಕೇಂದ್ರದಿಂದ ನವಯುಗ ಸಂಸ್ಥೆಗೆ ಅಂತಿಮ ಗಡುವು ನೀಡಲಾಗಿದೆ.ಈ ಡೆಡ್ ಲೈನ್ ಗೆ ನವಯುಗ ಕಂಪನಿಯ ಮುಖ್ಯಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಮೇ ಅಂತ್ಯದಲ್ಲಿ ಕಾಮಗಾರಿ ಸಂಪೂರ್ಣ ಮಾಡಿ ಕೊಡುವ ಜವಾಬ್ದಾರಿ ಕಂಪನಿಯದ್ದು.ಇನ್ನು ನವಯುಗ ಕಂಪನಿಯ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಆಕ್ಸಿಸ್ ಬ್ಯಾಂಕ್ 55 ಕೋಟಿ ಸಾಲ ನೀಡಿದೆ. ಇದಲ್ಲದೆ ಕೇಂದ್ರದಿಂದ 7 ಕೋಟಿ ರೂ ಅನುದಾನ ಕಾಮಗಾರಿಗಾಗಿ ನೀಡಲಾಗಿದೆ.ಕೇಂದ್ರ ಸರ್ಕಾರ ಅತ್ಯಂತ ಜವಬ್ದಾರಿಯುತವಾಗಿ ತನ್ನ ಕೆಲಸ ಕಾರ್ಯ ಮಾಡಿದೆ. ನವಯುಗ ಸಂಸ್ಥೆ ಗೆ ನೀಡಿದ ಡೆಡ್ ಲೈನ್ ಒಳಗೆ ಕೆಲಸವನ್ನು ಮಾಡಿ ಮುಗಿಸಬೇಕಾಗಿದೆ ಎಂದರು.