ಸುರತ್ಕಲ್, ಫೆ 28(SM): ಅಕ್ರಮ ಟೋಲ್ ಗೇಟ್ ತೆರವುಗೊಳಿಸಬೇಕು, ಮಾರ್ಚ್ ಒಂದರಿಂದ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸುವ ತೀರ್ಮಾನವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ "ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ" ವತಿಯಿಂದ ಗುರುವಾರದಂದು ಟೋಲ್ ಗೇಟ್ ಮುಂಭಾಗ ಜನಾಗ್ರಹ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ನಾಗರಿಕರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.
ಜನಾಗ್ರಹ ಸಭೆಯಲ್ಲಿ ಮೂವತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ನ್ನು ಹೆದ್ದಾರಿ ಪ್ರಾಧಿಕಾರ ಈಗಾಗಲೇ ತೆಗೆದು ಕೊಂಡಿರುವ ತೀರ್ಮಾನದಂತೆ ವಿಳಂಬವಿಲ್ಲದೆ ಅಲ್ಲಿಂದ ತೆರವುಗೊಳಿಸಬೇಕು. ತೆರವುಗೊಳ್ಳುವವರಗೆ ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಗೆ ಟೋಲ್ ವಿಧಿಸಬಾರದು. ಜನಾಗ್ರಹ ಸಭೆಯ ಒತ್ತಾಯದ ಹೊರತಾಗಿಯೂ ಮಾರ್ಚ್ ೦೧ರಿಂದ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಗೊಂಡರೆ ಸಾಮೂಹಿಕವಾಗಿ ಟೋಲ್ ಪಾವತಿಸದೆ ಪ್ರತಿರೋಧ ಒಡ್ಡುವುದು, ಯಾವುದೆ ಬೆಲೆ ತೆತ್ತಾದರು ಸ್ಥಳೀಯರಿಂದ ಟೋಲ್ ಸಂಗ್ರಹಿಸದಂತೆ ಪ್ರತಿಭಟಿಸುವುದಾಗಿ ಸಾಮೂಹಿಕವಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಆರಂಭದಲ್ಲಿ ಮಾತಾಡಿದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ತೆರವುಗೊಳಿಸುವ ತೀರ್ಮಾನ ಕೈಗೊಂಡು ವರ್ಷದ ನಂತರವೂ ಅಕ್ರಮ ಟೋಲ್ ಗೇಟ್ ಸುರತ್ಕಲ್ ನಲ್ಲಿ ಕಾರ್ಯಾಚರಿಸಲು ಸಂಸದ ನಳಿನ್ ಕುಮಾರ್ ಕಟೀಲು ಅವರ ವೈಫಲ್ಯವೇ ನೇರ ಕಾರಣ ಎಂದು ಆರೋಪಿಸಿದರು.