ಮಂಗಳೂರು, ಫೆ 28(SM): ಮಾರ್ಚ್ 01ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಳ್ಳುತ್ತವೆ. ಪರೀಕ್ಷೆಗಳು ಸುಸೂತ್ರವಾಗಿ ನಡೆಸುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹಾಗೂ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಎಲ್ಲಾ ಜೆರಾಕ್ಸ್ ಅಂಗದಿಗಳನ್ನು ಮುಚ್ಚುವಂತೆ ಸರಕಾರ ಆದೇಶಹೊರಡಿಸಿದ್ದು, ಜಿಲ್ಲೆಯ ಕೇಂದ್ರಗಳ ಪಕ್ಕದಲ್ಲಿರುವ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.
ಇನ್ನು ಮಾರ್ಚ್ 01ರಿಂದ ಮಾರ್ಚ್ 18ರ ತನಕ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ. ಇನ್ನು ಕೇಂದ್ರಗಳ ಸುತ್ತ ಪರೀಕ್ಷಾರ್ಥಿಗಳನ್ನು ಹೊರತು ಪಡಿಸಿ ಸಾರ್ವಜನಿಕರು ತಿರುಗಾಡುವಂತಿಲ್ಲ. 5 ಜನರು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಸ್ಪೋಟಕ ವಸ್ತುಗಳು, ಮಾರಕಾಸ್ತ್ರಗಳ ರವಾನೆ ಕೇಂದ್ರಗಳ ಸುತ್ತ ನಿಷೇಧಿಸಲಾಗಿದೆ. ಇನ್ನು ಮೊಬೈಲ್ ಸೇರಿದಂತೆ ಇಲೆಕ್ಟ್ರಾನಿಕ ಉಪಕರಣಗಳನ್ನು ಪರೀಕ್ಷಾ ಕೇಂದ್ರದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.