ಉಳ್ಳಾಲ, ಮಾ. 01(SM): ಮಂಗಳೂರು ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಗ್ರಾಮಗಳನ್ನು ಒಳಗೊಂಡ ಬಹುಕಾಲದ ಅಪೇಕ್ಷೆಯಾಗಿದ್ದ ಉಳ್ಳಾಲವನ್ನು ತಾಲೂಕು ಕೇಂದ್ರವಾಗಿ ರಾಜ್ಯ ಸರಕಾರ ಘೊಷಣೆ ಮಾಡಿದೆ.
ನೂತನ ತಾಲೂಕು ರಚನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದೆ. ತಾಲೂಕು ಕೇಂದ್ರದಿಂದ ವಂಚಿತವಾಗಿದ್ದ ಮೂಲಭೂತ ಸೌಕರ್ಯವಾಗಿದ್ದ ಅಗ್ನಿಶಾಮಕ ಠಾಣೆ, ಕ್ರೀಡಾಂಗಣ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಯಾವುದೇ ಅಡೆತಡೆಯಿಲ್ಲದೆ ನೂತನ ತಾಲೂಕು ರಚನೆಯಾಗಿರುವುದು ಇತಿಹಾಸವಾಗಿದೆ ಎಂದು ಮಂಗಳೂರು ಕ್ಷೇತ್ರದ ಶಾಸಕ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಂತಸ ವ್ಯಕ್ತಪಡಿಸಿ ದಾಯ್ಜಿವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ತಾಲೂಕು ವ್ಯಾಪ್ತಿಯ ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್, ತಲಪಾಡಿ, ಸೋಮೇಶ್ವರ, ಕಿನ್ಯ, ಬೆಳ್ಮ, ಮುನ್ನೂರು, ಅಂಬ್ಲಮೊಗರು, ಹರೇಕಳ, ಪಾವೂರು, ಮಂಜನಾಡಿ, ಕೊಣಾಜೆ, ಬೋಳಿಯಾರು ಗ್ರಾಮಗಳು ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯ ನರಿಂಗಾನ, ಬಾಳೆಪುಣಿ- ಕೈರಂಗಳ, ಕುರ್ನಾಡು, ಸಜಿಪ ಪಡು, ಸಜಿಪ ನಡು, ಇರಾ, ಪಜೀರು ಗ್ರಾಮಗಳು ನೂತನ ತಾಲೂಕಿಗೆ ಸೇರ್ಪಡೆಯಾಗಲಿವೆ. ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿರುವ ಬಂಟ್ವಾಳ ತಾಲೂಕು ವ್ಯಾಪ್ತಿಯ ಮೇರೆಮಜಲು-ಕೊಡ್ಮಾಣ್, ಪುದು, ತುಂಬೆ ಗ್ರಾಮಗಳು ಉಳ್ಳಾಲ ತಾಲೂಕಿನಿಂದ ಹೊರಗುಳಿಯಲಿದೆ.
ಇನ್ನು ಮಂಗಳೂರು ತಾಲೂಕಾಗಿರುವಾಗ ಸರಕಾರಿ ಕೆಲಸಗಳಿಗೆ ಅಲೆದಾಡಬೇಕಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ಅಲೆದಾಟ ಉಳ್ಳಾಲದ ಜನತೆಗೆ ತಪ್ಪಲಿದೆ. ಆದರೆ ತಾಲೂಕು ಮಟ್ಟದ ಅಧಿಕಾರಿಗಳು, ಕಚೇರಿಯೂ ಶೀಘ್ರವೇ ಆಗಬೇಕಿದೆ. ಮಂಗಳೂರು ತಾಲೂಕಿನ್ನಲ್ಲಿರು ಸಂದರ್ಭ ಬಡವರಿಗೆ ಸಿಗುವ ಸವಲತ್ತುಗಳು ಸರಿಯಾಗಿ ಸಮಯಕ್ಕೆ ಸಿಗುವುದರಲ್ಲಿ ತೊಂದರೆಯಾಗುತ್ತಿದೆ. ಆದುದರಿಂದ ಶೀಘ್ರವೇ ಸಚಿವರು ತಾಲೂಕಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುವಲ್ಲಿ ಪ್ರಯತ್ನಿಸಬೇಕಿದೆ ಎಂಬುವುದಾಗಿ ನಾಗರಿಕರು ಆಗ್ರಹಿಸುತ್ತಿದ್ದಾರೆ.