ಪುತ್ತೂರು,ಮಾ 01 (MSP): ಕರ್ನಾಟಕ ಕೇರಳ ಗಡಿ ಪ್ರದೇಶ ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಗ್ರಾಮೀಣ ಪ್ರದೇಶ ಕನ್ನಟಿಮಾರ್ ಎಂಬಲ್ಲಿ ಹಣ ಪಣಕ್ಕೆ ಇಟ್ಟು ನಡೆಸಲಾಗುತ್ತಿದ್ದ ಜೂಜಾಟದ ಅಡ್ಡೆಯೊಂದರ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ಪೊಲೀಸರು 14 ಮಂದಿ ಬಂಧಿಸಿ, ನಗದು ಸಹಿತ 45,0470 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕನ್ನ ಟಿಮಾರ್ ಎಂಬಲ್ಲಿ `ಸಾಗರ್ ರಿಕ್ರಿಯೇಷನ್ ಕ್ಲಬ್'ನಲ್ಲಿ ಜೂಜಾಟದ ಅಡ್ಡೆಗೆ ಖಚಿತ ಮಾಹಿತಿ ಮೇರೆಗೆ ಪ್ರೊಬೆಷನರಿ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರ ನೇತೃತ್ವದಲ್ಲಿ ಪುತ್ತೂರು ಸಂಪ್ಯ ಠಾಣಾ ಎಸ್ಐ ಸಕ್ತಿವೇಲು ಹಾಗೂ ಸಿಬ್ಬಂದಿ ಈ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.
ಸಾಗರ್ ರಿಕ್ರಿಯೇಷನ್ ಕ್ಲಬ್ ವ್ಯವಸ್ಥಾಪಕ ಅಶೋಕ ಕೆ. ಗಟ್ಟಿ, ಕ್ಲಬ್ ಸಹಾಯಕ ಪ್ರದೀಪ್, ಜೂಜಾಟದಲ್ಲಿ ನಿರತರಾಗಿದ್ದ ರಾಧಾಕೃಷ್ಣ, ವಿಠಲ, ಮಹಮ್ಮದ್, ತೀರ್ಥಪ್ರಸಾದ್ ರೈ, ಗಣೇಶ್ ಪಾಟಾಳಿ, ಸುಲೈಮಾನ್, ಕೃಷ್ಣ, ಶ್ರೀಧರ್, ಅಶ್ರಫ್, ಅಬ್ಬಾಸ್, ಕುಮಾರ್ ಕೆ. ಹಮೀದ್ ಎಂಬವರನ್ನು ಬಂಧಿಸಲಾಗಿದೆ.
ಇನ್ನು ಕ್ಲಬ್ ಅಧ್ಯಕ್ಷ ಪ್ರದೀಪ್ ರೈ ಪಾಂಬಾರು ಮತ್ತು ಕಟ್ಟಡದ ಮಾಲೀಕ ಶರತ್ ಕುಮಾರ್ ರೈ ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ.
ಬಂಧಿತರಿಂದ ಪೊಲೀಸರು ಜೂಜಾಟಕ್ಕೆ ಬಳಸಲಾಗಿದ್ದ 52, 370 ನಗದು, 1 ಜೀಪ್, 1ಅಟೋರಿಕ್ಷಾ , 9 ದ್ವಿಚಕ್ರ ವಾಹನಗಳು ಮತ್ತು ಆಟಕ್ಕೆ ಬಳಸಲಾಗಿದ್ದ ಪೀಠೋಪಕರಣಗಳನ್ನು ಸ್ವಾಧೀನ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.