ಉಡುಪಿ, ಮಾ 01 (MSP): ಭಾರತದ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ತೋರಿದ ಧೈರ್ಯ ಮೆಚ್ಚುವಂತದ್ದು. ಶತ್ರು (ಪಾಕಿಸ್ತಾನ) ದೇಶದಲ್ಲಿ ಆತ ವರ್ತಿಸಿದ ರೀತಿ ದೇಶದ ಗೌರವವನ್ನು ಹೆಚ್ಚಿಸಿದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಉಡುಪಿಯಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಅಭಿನಂದನ್ ಜೇಬಲ್ಲಿದ್ದ ಭದ್ರತೆಗೆ ಸಂಬಂಧಿಸಿದ ಕಾಗದ ಪತ್ರ ನುಂಗಿ ದೇಶದ ಕಾಳಜಿ ತೋರಿದ್ದಾರೆ. ಅವರು ಸಾಹಸಕ್ಕೆ ಪ್ರತಿಯೊಬ್ಬ ಭಾರತೀಯರು ಸೆಲ್ಯೂಟ್ ಹೊಡೆಯಬೇಕು. ಅವರಿಗೆ ಸಾವಿರ ಸಾವಿರ ಅಭಿನಂದನೆಗಳು' ಎಂದರು.
'ಯುದ್ಧ ಬೇಡ. ಯುದ್ಧದಿಂದ ಸಾವಿರಾರು ಸಾವು ನೋವುಗಳು ಸಂಭವಿಸುತ್ತದೆ. ನಮ್ಮ ಸೈನಿಕರನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತವೆ. ಹಾಗಾಗಿ ಆತ್ಮಾಭಿಮಾನಕ್ಕೆ ಚ್ಯುತಿಬಾರದ ರೀತಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು' ಎಂದು ಮನವಿ ಮಾಡಿದರು .ಮೋದಿ ಸರಿಯಾದ ಸಮಯದಲ್ಲಿ ಪ್ರಧಾನಿಗಳಾಗಿದ್ದಾರೆ. ಅವರ ನಿರ್ಧಾರಕ್ಕೆ ನನ್ನ ಬೆಂಬಲವಿದೆ ಅವರ ಅಭಿವೃದ್ಧಿ ನಿಲುವು ಮತ್ತು ಧೈರ್ಯ, ದಿಟ್ಟತನವನ್ನು ನಾನು ಮೆಚ್ಚುತ್ತೇನೆ.
''ದೇಶದ ಭದ್ರತೆಗೆ ಕಂಟಕವಾಗಿರುವ ಹಾಗೂ ನಮ್ಮ ದೇಶದ ಯೋಧರು, ಜನರನ್ನು ಬಲಿ ಪಡೆಯುತ್ತಿರುವ ಉಗ್ರರನ್ನು ಹುಡುಕಿ ಕೊಲ್ಲಬೇಕು. ಉಗ್ರರ ಸಂಹಾರ ಅಗತ್ಯವಾಗಿ ಆಗಬೇಕು. ಅಮಾಯಕರ ಹತ್ಯೆ ಆಗದಂತೆ ಎಚ್ಚರವಹಿಸಬೇಕು. ಸೈನಿಕರ ಸರ್ಜಿಕಲ್ ಸ್ಟ್ರೈಕ್ ಗೆ ಅಭಿನಂದಿಸುತ್ತೇನೆ'' ಎಂದರು.
''ದೇಶದಲ್ಲಿನ ಬುದ್ದಿಜೀವಿಗಳ ಬಗ್ಗೆ ತಿರಸ್ಕಾರವಿದೆ. ಈ ಸಮಯದಲ್ಲಿಯೂ ಅವರು ದೇಶಾಭಿಮಾನ ತೋರಿಲ್ಲದ್ದಕ್ಕೆ ಖೇದವಿದೆ. ಬುದ್ದಿಜೀವಿಗಳಿಗೆ ಒಳ್ಳೆ ಬುದ್ದಿ ಬರಲಿ, ಅವರು ದುರ್ಬುದ್ದಿಜೀವಿಗಳಾಗಬಾರದು. ಅವರಿಗೆ ಒಳ್ಳೆಯ ಬುದ್ದಿ ಬರಲೆಂದು ಣಾನು ದೇವರಲ್ಲಿ ಪ್ರಾರ್ಥಿಸುವೆ" ಶ್ರೀಗಳು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ 22 ಸೀಟು ಗೆಲ್ಲುವ ಹೇಳಿಕೆ ಬಹಳ ಚಿಕ್ಕದು. ಇದಕ್ಕೆ ಅಷ್ಟೊಂದು ಮಹತ್ವ ನೀಡಬೇಕಾಗಿಲ್ಲ್ಲ ಎಂದು ಪೇಜಾವರಶ್ರೀಗಳು ಹೇಳಿದ್ದಾರೆ. 'ಇದು ದೊಡ್ಡ ವಿಚಾರವಲ್ಲ. ಇಂದಿರಾಗಾಂಧಿ ಆಳ್ವಿಕೆಯಲ್ಲಿ ಯುದ್ಧವಾದಾಗಲೂ ಕಾಂಗ್ರೆಸ್ ಗೆ ಪ್ರಯೋಜನವಾಗಿದೆ ಎಂದು ಎಲ್ಲರೂ ಮಾತನಾಡಿಕೊಂಡಿದ್ದರು.ಬಿಎಸ್ ವೈ ಹೇಳಿಕೆಯನ್ನು ದೊಡ್ಡ ವಿಷಯ ಮಾಡಬೇಕಾಗಿಲ್ಲ ' ಎಂದು ತಿಳಿಸಿದರು.