ಕುಂದಾಪುರ,ಮಾ 01 (MSP): ತಾಲೂಕಿನ ಹೆಮ್ಮಾಡಿ ಸಮೀಪದ ಕಟ್ ಬೆಲ್ತೂರು ಎಂಬಲ್ಲಿ ಹಂಚಿನ ಮನೆಯೊಂದರಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರು ಫೆ.28 ರ ಗುರುವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಟ್ಬೆಲ್ತೂರು ನಿವಾಸಿ ದಿವಂಗತ ನಾಗೇಶ್ ಎಂಬುವರ ಪತ್ನಿ ಗುಲಾಬಿ (55) ಎಂಬುವರೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಮಹಿಳೆ.
ನಾಗೇಶ್ ಹೋಟೆಲ್ ಉದ್ಯಮ ನಡೆಸಿಕೊಂಡಿದ್ದು ಐದು ವರ್ಷಗಳ ಹಿಂದೆ ಸಾವನ್ನಪ್ಪಿದ ಬಳಿಕ ಗುಲಾಬಿ ಮನೆ ಸಮೀಪ ಮೀನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು ಹಿರಿಯವನಾದ ನಾಗರಾಜ ಮದುವೆಯಾಗಿ ಮುಂಬೈಯಲ್ಲಿ ನೆಲೆಸಿದ್ದಾನೆ. ಎರಡನೆಯವನಾದ ನಟರಾಜ್ ಬೆಂಗಳೂರಿನಲ್ಲಿದ್ದಾನೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಗುಲಾಬಿ ಒಬ್ಬರೇ ಇದ್ದು, ಸ್ಥಳೀಯರಿಗೆ ಮೀನು ಮಾರುತ್ತಿದ್ದರು.
ಸಮೀಪದ ನಿವಾಸಿಯಾಗಿರುವ ಶಿವರಾಮ ಎಂಬುವರು ಗುರುವಾರ ಗುಲಾಬಿಯವರ ಕೈಯಿಂದ ಮೀನು ಖರೀದಿಸಿದ್ದು, ಶುಕ್ರವಾರವೂ ಮೀನು ಬೇಕು ಎಂದಿದ್ದರು. ಶುಕ್ರವಾರ ಬೆಳಿಗ್ಗೆಯಾದರೂ ಗುಲಾಬಿ ಬಾಗಿಲು ತೆರೆಯದೇ ಇದ್ದುದರಿಂದ ಅನುಮಾನಗೊಂಡ ಶಿವರಾಮ ಸುಮಾರು 10.30ರ ಸಮಯಕ್ಕೆ ಗುಲಾಬಿಯವರ ಮನೆಯ ಬಾಗಿಲು ತಟ್ಟಿದ್ದಾರೆ. ಆಗ ಒಳಗಿಂದ ಚಿಲಕ ಹಾಕದೇ ಇದ್ದ ಕಾರಣ ಬಾಗಿಲು ತೆರೆದುಕೊಂಡಿದೆ. ಒಳಗೆ ನೋಡಿದಾಗ ಬೆಡ್ರೂಮಿನಲ್ಲಿ ಗುಲಾಬಿ ಮಲಗಿದ ಸ್ಥಿತಿಯಲ್ಲಿಯೇ ಇದ್ದರು. ಕರೆದರೂ ಏಳದ ಕಾರಣ ಅನುಮಾನಗೊಂಡ ಶಿವರಾಮ ಅವರು ಮನೆ ಸಮೀಪದಲ್ಲಿರುವ ಗುಲಾಬಿಯ ತಂಗಿಗೆ ಸುದ್ಧಿ ಮುಟ್ಟಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲಾಯಿತು.
ಅನುಮಾನಾಸ್ಪದ ಸಾವು : ಗುರುವಾರ ಸಂಜೆಯವರೆಗೂ ಆರಾಮವಾಗಿ ಓಡಾಡಿಕೊಂಡಿದ್ದ ಗುಲಾಬಿ ಮಲಗಿದ ಸ್ಥಿತಿಯಲ್ಲಿಯೇ ಸಾವನ್ನಪ್ಪಿದ್ದರೂ ಸ್ಥಳೀಯರ ಪ್ರಕಾರ ಆಕೆ ಪ್ರತಿ ದಿನ ನಾಲ್ಕೂವರೆ ಪವನ್ ತೂಕದ ಸರ ಧರಿಸುತ್ತಿದ್ದರು ಎನ್ನಲಾಗಿದೆ. ಆದರೆ ಶುಕ್ರವಾರ ಬೆಳಿಗ್ಗೆ ಆಕೆಯ ಕುತ್ತಿಗೆಯಲ್ಲಿ ಸರ ಇಲ್ಲದೇ ಇರುವುದು ಸಾವಿನ ಬಗ್ಗೆ ಅನುಮಾನ ಮೂಡಿಸಿದೆ. ಅಲ್ಲದೇ ಮನೆಯೊಳಗಡೆ ಸಿಗರೇಟಿನ ಧೂಳು ಬಿದ್ದಿತ್ತು ಎನ್ನುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಲ್ಲದೇ ಗುರುವಾರ ಸಂಜೆ ಯಾರೋ ಆಕೆಯ ಮನೆಗೆ ಬಂದಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ ಎನ್ನಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಅನುಮಾನಾಸ್ಪದ ಸಾವು ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆ ಆರಂಭ : ಘಟನಾ ಸ್ಥಳಕ್ಕೆ ಸಹಾಯಕ ಎಸ್ಪಿ, ಡಿವೈಎಸ್ಪಿ ದಿನೇಶ್ ಕುಮಾರ್, ವೃತ್ತ ನಿರೀಕ್ಷಕ ಮಂಜಪ್ಪ ಹಾಗೂ ಕುಂದಾಪುರ ಠಾಣೆಯ ಎಸೈ ಹರೀಶ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊರೆನ್ಸಿಕ್ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲಕ್ಕೆ ಕಳುಹಿಸಿದ್ದು, ಪೊಲೀಸರು ಸಾವಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ.