ಬೆಂಗಳೂರು ಅ 31: ರಾಜ್ಯದ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕರಾಗಿ ಮಹಿಳಾ ಅಧಿಕಾರಿ ನೀಲಮಣಿ ಎನ್ ರಾಜು ನೇಮಕವಾಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಖಾಕಿ ಪಡೆಗೆ ಮಹಿಳಾ "ದಂಡ ನಾಯಕಿ'ಯನ್ನು ಕಾಣುವ ಯೋಗ ಒದಗಿಬಂದಿದೆ.ಹಿರಿಯ ಐಪಿಎಸ್ ಅಧಿಕಾರಿಣಿಯಾಗಿರುವ ಉತ್ತರಾಖಂಡದ ರೂರ್ಕಿ ಮೂಲದ ನೀಲಮಣಿ ಅವರಿಗೆ ಸೇವಾ ಹಿರಿತನದ ಆಧಾರದ ಮೇರೆಗೆ ರಾಜ್ಯ ಪೊಲೀಸ್ ಡಿಜಿ ಐಜಿ ಒಲಿದು ಬಂದಿದೆ. ಈ ಹಿಂದೆ ಇವರೊಂದಿಗೆ ಸಿ.ಎಚ್.ಕಿಶೋರ್ ಚಂದ್ರ, ಎಂ.ಎನ್. ರೆಡ್ಡಿ ಅವರ ಹೆಸರುಗಳೂ ಕೇಳಿಬಂದಿತ್ತು.
ನೀಲಮಣಿ ರಾಜು ಹುಟ್ಟಿದ್ದು 1960 ಜನವರಿ 17ರಂದು. ನೀಲಮಣಿ ರಾಜು 1983ನೇ ಸಾಲಿನ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯ ಮಾಹಿತಿ ಆಯೋಗದ ಮುಖ್ಯ ಆಯುಕ್ತ ನರಸಿಂಹರಾಜು ಅವರ ಪತ್ನಿಯಾಗಿರುವ ಅವರು ಒಂದಷ್ಟು ಕಾಲ ಬೆಂಗಳೂರು ಗ್ರಾಮಾಂತರ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ 1993ರಲ್ಲಿ ಕೇಂದ್ರ ಸೇವೆಗೆ ತೆರಳಿದ್ದರು. 23ಕ್ಕೂ ಹೆಚ್ಚು ವರ್ಷಗಳ ಕಾಲ ರಾಜ್ಯದಿಂದ ಹೊರಗಿದ್ದ ನೀಲಮಣಿ ರಾಜು 2016ರಲ್ಲಿ ರಾಜ್ಯ ಸೇವೆಗೆ ವಾಪಸಾಗಿದ್ದರು.