ಮಲ್ಪೆ, ಮಾ 02(AZM):ಮಲ್ಪೆ ಬೀಚ್ ನಲ್ಲಿ ಬಾಂಬ್ ಸ್ಪೋಟ ಮಾಡುತ್ತೇವೆ ಎನ್ನುವ ಬೆದರಿಕೆಯೊಡ್ಡಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಕಳಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮಲ್ಪೆ ತೊಟ್ಟಂ ನಿವಾಸಿ ಸೃಜನ್(18) ಎಂದು ಗುರುತಿಸಲಾಗಿದೆ.
1 ನಿಮಿಷ 24 ಸೆಕೆಂಡುಗಳ ವೀಡಿಯೋ ದೃಶ್ಯದಲ್ಲಿ ಯುವಕ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹಿಂದಿಯಲ್ಲಿ ಬೆದರಿಕೆಯೊಡ್ಡಿದ್ದಾನೆ. ವೀಡಿಯೋದ ಆರಂಭದಲ್ಲಿ ಪಾಕಿಸ್ತಾನಕ್ಕೆ ಜಯಕಾರ ಕೂಗಿರುವ ಯುವಕ, ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್ ಎಂದು ಹೇಳಿದ್ದಾನೆ.
ಈ ವೀಡಿಯೋ ತುಣುಕನ್ನು ಆಧರಿಸಿ ಮಲ್ಪೆ ಪೊಲೀಸರು ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದು, ತಮ್ಮ ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಈ ಹಿನ್ನಲೆ ಕೂಡಲೇ ಕಾರ್ಯಪ್ರವೃತ್ತರಾದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀಮತಿ ನಿಶಾ ಜೇಮ್ಸ್ ಐಪಿಎಸ್ ಹಾಗೂ ಶ್ರೀ ಕುಮಾರಚಂದ್ರ ಕೆ.ಎಸ್.ಪಿ.ಎಸ್.ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಕೂಡಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಲ್ಪೆ ಬೀಚ್ ಪರಿಸರದಲ್ಲಿ ಅಂಗಡಿ ಇಟ್ಟುಕೊಂಡಿರುವ ನೇಪಾಲ ಮೂಲದವರಾದ ಆನಂದ್ ಎಂಬಾತನಿಗೆ ಈ ವೀಡಿಯೋ ಬಂದಿರುವುದಾಗಿ ಪೊಲೀಸ್ ಕಾರ್ಯಾಚರಣೆಯಲ್ಲಿ ತಿಳಿದು ಬಂದಿದ್ದು, ಆತನಿಗೆ ಮಲ್ಪೆ ತೊಟ್ಟಂ ನಿವಾಸಿ ಸೃಜನ್ ಎಂಬಾತ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾನೆ.
ಈ ಹಿನ್ನಲೆ ಸೃಜನ್ ಎಂಬಾತನ ಮನೆಗೆ ಹೋಗಿ ವಿಚಾರಿಸಿದಾಗ ತಾನೇ ಈ ವೀಡಿಯೋ ತುಣುಕನ್ನು ಮಾಡಿರುವುದಾಗಿ ಪೊಲೀಸರೊಂದಿಗೆ ತಪ್ಪೊಪ್ಪಿಕೊಂಡಿದ್ದಾನೆ.
ಸೃಜನ್ ಹದಿನೆಂಟರ ಹರೆಯದ ಯುವಕನಾಗಿದ್ದು, ಈತನ ತಂದೆ ಪ್ಲಾಸ್ಟಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಆರೋಪಿ ಸೃಜನ್ ಕೃತ್ಯಕ್ಕೆ ಬಳಸಲಾಗಿದ್ದ ಟವೆಲ್ ಹಾಗೂ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.