ಬೈಂದೂರು,ಮಾ 03 (MSP): ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ವತಿಯಿಂದ ವಿಜಯ ಸಂಕಲ್ಪ ಯಾತ್ರೆಯ ಬೈಕ್ ರ್ಯಾಲಿಗೆ ಬೈಂದೂರಿನಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾ.2ರ ಶನಿವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದಾದ್ಯಂತ ಇವತ್ತು ವಿಜಯ ಸಂಕಲ್ಪ ಬೈಕ್ ರ್ಯಾಲಿ ನಡೆಯುತ್ತಿದ್ದು, ಬೈಂದೂರು ಮಂಡಲದ ಎಲ್ಲಾ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿಯೂ ಈ ಬೈಕ್ ರ್ಯಾಲಿ ನಡೆಯುತ್ತಿದೆ. ದೇಶದ ಅಭಿವೃದ್ದಿ ಬಗ್ಗೆ, ದೇಶದ ಒಳಿತಿಗಾಗಿ ಈ ರ್ಯಾಲಿ ನಡೆಯುತ್ತಿದೆ. ಇವತ್ತು ನಮಗೆ ಒಂದು ಅರ್ಥದಲ್ಲಿ ಜಯ ಸಿಕ್ಕಿದೆ. ನಮ್ಮ ಸೇನಾನಿ ಅಭಿನಂದನ್ ಅವರು ಸುರಕ್ಷಿತವಾಗಿ ದೇಶಕ್ಕೆ ಬಂದಿದ್ದಾರೆ. ಆ ಸಂಭ್ರಮದಲ್ಲಿ ನಾವಿದ್ದೇವೆ ಎಂದರು.
ಬೈಂದೂರು ಮಂಡಲದ ಅಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು ಮಾತನಾಡಿ, ಭಾರತೀಯ ಜನತಾ ಪಕ್ಷ ನೀಡಿದ 9 ಕಾರ್ಯಕ್ರಮಗಳನ್ನು ಬೈಂದೂರು ಮಂಡಲ ಯಶಸ್ವಿಯಾಗಿ ನಡೆಸಿದೆ. ಈ ವಿಜಯ ಸಂಕಲ್ಪ ಬೈಕ್ ರ್ಯಾಲಿಗೂ ಕೂಡಾ ಜನ ಅದ್ಬುತವಾಗಿ ಸ್ಪಂದಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ಸುರೇಶ ಬಟ್ವಾಡಿ, ತಾ.ಪಂ.ಸದಸ್ಯರು, ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ದೀಪಕ್ ಕುಮಾರ್ ಶೆಟ್ಟಿ, ಬಾಲಚಂದ್ರ ಭಟ್, ಯುವ ಮೋರ್ಛಾ ಅಧ್ಯಕ್ಷ ಶರತ್ ಕುಮಾರ ಶೆಟ್ಟಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರಿಯದರ್ಶಿನಿ ದೇವಾಡಿಗ, ಗ್ರಾ.ಪಂ.ಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.
ಬೈಂದೂರು ಬ್ಲಾಕ್ ಯುವ ಮೋರ್ಚಾ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು.